ಕಾಂಗ್ರೆಸ್ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್
ಬೆಂಗಳೂರು: ಸಿಬಿಐ ದಾಳಿ ಕುರಿತು ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಕಾಂಗ್ರೆಸ್ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ಸಹೋದರ ಹಾಗೂ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅವರು, ಕಿರುಕುಳ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಸಿಬಿಐ ಸಂಸ್ಥೆಯನ್ನು ಬಳಸಿಕೊಳ್ಳುತ್ತಿದೆ ಎಂದು ಗುರುವಾರ ಆರೋಪ ಮಾಡಿದ್ದಾರೆ.
ಸಿಬಿಐ ದಾಳಿ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಕೇಂದ್ರದಲ್ಲಿರುವ ಬಿಡೆಪಿ ನಾಯಕರು ಕಳೆದ 15 ದಿನಗಳಿಂದಲೂ ನಮಗೆ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಇಡಿ, ಐಟಿ ಹಾಗೂ ಸಿಬಿಐ ಸಂಸ್ಥೆಗಳು ದುರ್ಬಳಕೆಯಾಗುತ್ತಿರುವುದಕ್ಕೆ ಅಮಿತ್ ಶಾ ಹಾಗೂ ನರೇಂದ್ರ ಮೋದಿಯವರೇ ಜವಾಬ್ದರಾರರಾಗಿದ್ದಾರೆ. ನಮ್ಮ ಕುಟುಂಬವನ್ನು ಗುರಿ ಮಾಡಲಾಗುತ್ತಿದೆ. ಬಿಜೆಪಿ ಪಕ್ಷದಲ್ಲಿರುವ ನಮ್ಮ ಸ್ನೇಹಿತರಿಗೆ ಹೇಳಲು ಇಚ್ಛಿಸುತ್ತೇವೆ, ಡಿಕೆ. ಶಿವಕುಮಾರ್ ಹಾಗೂ ಡಿಕೆ.ಸುರೇಶ್ ಇಂತಹ ಯಾವುದೇ ತಂತ್ರಗಳಿಗೂ ಹೆದರುವುದಿಲ್ಲ ಎಂದು ತಿಳಿಸಿದ್ದಾರೆ.
ಬಳಿಕ ಮಾತನಾಡಿರುವ ಡಿ.ಕೆ,ಶಿವಕುಮಾರ್ ಅವರು, ಸಹೋದರ ಸುರೇಶ್ ಸೇರಿದಂತೆ ಒಟ್ಟು 11 ಮಂದಿ ವಿರುದ್ಧ ಸಿಬಿಐ ಅಧಿಕಾರಿಗಳು ಸರ್ಚ್ ವಾರೆಂಟ್ ತಂದಿದ್ದರು. ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯಕ್ಕೆ ಗುಜರಾತ್ ಶಾಸಕರು ಆಗಮಿಸಿದ ದಿನದಿಂದಲೂ ಕಾಂಗ್ರೆಸ್ ಮೇಲೆ ಬಿಜೆಪಿ ನಾಯಕರು ಭಾರೀ ಒತ್ತಡವನ್ನು ಹೇರುತ್ತಿದ್ದಾರೆಂದು ಆರೋಪಿಸಿದ್ದಾರೆ.
ರಾಜಕೀಯವಾಗಿ ನಮ್ಮ ಮೇಲೆ ಭಾರೀ ಒತ್ತಡಗಳನ್ನು ಹೇರಲಾಗುತ್ತಿದೆ. ಭಾರೀ ಕಿರುಕುಳವನ್ನು ನೀಡಲಾಗುತ್ತಿದೆ. ಆದರೆ, ಅವರ ಹೆಸರುಗಳನ್ನು ನಾನು ಬಹಿರಂಗಪಡಿಸಲು ಇಚ್ಛಿಸುವುದಿಲ್ಲ. ಸಿಬಿಐ ದಾಳಿಗಳ ಮೂಲಕ ನಮ್ಮ ಕೈಗಳನ್ನು ಕಟ್ಟಿಹಾಕಲು ಯತ್ನ ನಡೆಸುತ್ತಿದ್ದಾರೆ. ಈ ರೀತಿಯ ದಾಳಿಗಳಿಗೆ ನಾವು ಹೆದರುವುದಿಲ್ಲ. ಈ ಮೂಲಕ ನಮಗೆ ಕಠಿಣ ಸಂದೇಶವನ್ನು ರವಾನಿಸುತ್ತಿದ್ದಾರೆ. ಈ ರೀತಿಯ ದಾಳಿಗಳಿಂದ ನಮ್ಮ ಕೈಗಳನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ದಾಳಿಗಳು ಅವರಿಗೆ ಕೆಲಸಕ್ಕೆ ಬರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಅವರು ಏನನ್ನು ಬೇಕಾದರೂ ಮಾಡಲಿ, ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆ.
7-8 ತಿಂಗಳುಗಳಿಂದ ನನ್ನ ಇಡೀ ಕುಟುಂಬಕ್ಕೆ ಕಿರುಕುಳ ನೀಡಲಾಗುತ್ತಿದೆ. ನ್ಯಾಯಾಂಗದ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದೆ. ಇಡೀ ದೇಶ ಎಲ್ಲವನ್ನೂ ನೋಡುತ್ತಿದೆ. ನ್ಯಾಯಯುತ ರಾಜಕೀಯವನ್ನು ಮಾಡೋಣ. ತಾವು ಮಾಡುತ್ತಿರುವ ಕೆಲಗಳಿಗೆ ಕೆಲ ಅಧಿಕಾರಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಅವರ ಕೆಲಸವನ್ನು ಅವರು ಮಾಡಲೇಬೇಕಿದೆ ಎಂದು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಕೇಂದ್ರ ಸರ್ಕಾರ ಸಿಬಿಐ ಮೂಲಕ ಕಾಂಗ್ರೆಸ್ ನಾಯಕರನ್ನು ಗುರಿ ಮಾಡುತ್ತಿದೆ. ಇದು ಖಂಡನೀಯ. ಬಿಜೆಪಿಯವರ ಈ ರೀತಿಯ ದುರುದ್ದೇಶಪೂರ್ವಕ ನಡೆಗಳಿಗೆ ಯಶಸ್ಸು ಸಿಗುವುದಿಲ್ಲ. ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos