ಕಲಬುರಗಿ: ಸಚಿವ ಸ್ಥಾನ ಹಂಚಿಕೆಗೆ ಸಂಬಂಧಿಸಿದಂತೆ ಪಕ್ಷದಲ್ಲಿ ಅಸಮಾಧಾನ ಇರುವುದು ನಿಜ. ಅದನ್ನು ಹೈಕಮಾಂಡ್ ಶಮನಗೊಳಿಸಲಿದೆ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಲಬುರಗಿಯಲ್ಲಿ ಮಾತನಾಡಿದ ಅವರು, ಪಕ್ಷಕ್ಕಾಗಿ ಅನೇಕರು ದುಡಿದಿದ್ದಾರೆ. 3–4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಮಂತ್ರಿ ಆಗಬೇಕು ಎಂದು ಬಯಸುವುದು ಸಹಜ. ಹೈಕಮಾಂಡ್ ಪ್ರತಿನಿಧಿಯಾಗಿ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ ಅವರು ಸರಿಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಒಂದು ವೇಳೆ ಹೈ ಕಮಾಂಡ್ ನನಗೆ ಜವಾಬ್ದಾರಿ ನೀಡಿದರೇ ಅತೃಪ್ತರನ್ನು ಸಮಾಧಾನ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.
ಸಂಪುಟ ವಿಸ್ತರಣೆ ವೇಳೆ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲವೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವಗಿರಿಗೆ ಶಾಸಕರನನ್ನು ಆಯ್ಕೆ ಮಾಡುವುದು ಹೈಕಮಾಂಡ್ ಗೆ ಸೇರಿದ ವಿಷಯವಾಗಿದೆ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹಾಗೂ ನನ್ನ ಸಲಹೆ ಕೇಳಿದರು. ನಾವು ಸಲಹೆ ನೀಡಿದ್ದೆವು ಅಷ್ಟೇ, ನಿರ್ಧಾರ ಹೈ ಕಮಾಂಡ್ ಗೆ ಬಿಟ್ಟದ್ದು ಎಂದು ಹೇಳಿದ್ದಾರೆ.
ಕುಮಾರ ಸ್ವಾಮಿ ಐದು ವರ್ಷಗಳ ಅವಧಿಗೆ ಮುಖ್ಯಮಂತ್ರಿ ಎಂದು ಘೋಷಿಸಿದ್ದಕ್ಕೆ ಹೈಕಮಾಂಡ್ ವಿರೋಧ ವ್ಯಕ್ತ ಪಡಿಸಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೈಕಮಾಂಡ್ ಜೊತೆ ಚರ್ಚಿಸಿದ ಎಲ್ಲಾ ವಿಷಯವನ್ನು ನಾನು ನಿಮ್ಮ ಮುಂದೆ ಹೇಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.