ರಾಜಕೀಯ

ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿಗೆ 'ಜಯ'ಮಾಲೆ

Sumana Upadhyaya

ಬೆಂಗಳೂರು: ಪ್ರತಿಷ್ಠಿತ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಬಿ ಎನ್ ಪ್ರಹ್ಲಾದ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಜಯನಗರ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ತೆಕ್ಕೆಗೆ ಪಡೆದಿದೆ.

ಸೌಮ್ಯಾ ರೆಡ್ಡಿ ಅವರಿಗೆ 54,457 ಮತಗಳು ಲಭಿಸಿದರೆ, ಬಿಜೆಪಿಯ ಬಿ ಎನ್ ಪ್ರಹ್ಲಾದ್ 51,568 ಮತಗಳನ್ನು ಪಡೆದಿದ್ದಾರೆ. ಸೌಮ್ಯಾ ರೆಡ್ಡಿಗೆ 2,889 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇನ್ನು ಪಕ್ಷೇತರ ಅಭ್ಯರ್ಥಿ ರವಿ ಕೃಷ್ಣಾ ರೆಡ್ಡಿ ಠೇವಣಿ ಕಳೆದುಕೊಂಡಿದ್ದಾರೆ.


ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿಯಾದ ಸೌಮ್ಯಾ ರೆಡ್ಡಿಯವರು ಈ ಮೂಲಕ ಮೊದಲ ಬಾರಿಗೆ ಶಾಸಕಿಯಾಗಿ ವಿಧಾನಸೌಧ ಪ್ರವೇಶಿಸಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವನ್ನು ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಿದ್ದಾರೆ.

ಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿತ್ತು. ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ 80 ಸ್ಥಾನಗಳನ್ನು ಗೆದ್ದುಕೊಂಡಿದೆ.

ಇದೀಗ ಕರ್ನಾಟಕ ವಿಧಾನಸಭೆಯ 222 ಸದಸ್ಯ ಬಲದಲ್ಲಿ ಬಿಜೆಪಿ ಶಾಸಕರ ಸಂಖ್ಯೆ 104, ಕಾಂಗ್ರೆಸ್ 79(ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ನಿಧನ), ಜೆಡಿಎಸ್ 37, ಬಿಎಸ್ ಪಿ ಬೆಂಬಲದೊಂದಿಗೆ 38 ಹಾಗೂ ಪಕ್ಷೇತರ ಶಾಸಕರು ಇಬ್ಬರು.

ಗೆಲುವಿನ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸೌಮ್ಯಾ ರೆಡ್ಡಿ, ನನ್ನ ಮೇಲೆ ನಂಬಿಕೆಯಿಟ್ಟ ಜಯನಗರ ಕ್ಷೇತ್ರದ ಜನತೆಗೆ ನಾನು ಕೃತಜ್ಞತೆ ಹೇಳುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ನಾನು ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು ಈಗಿನಿಂದಲೇ ಕೆಲಸ ಆರಂಭಿಸುತ್ತೇನೆ. ನನ್ನ ಗೆಲುವಿನ ಯಶಸ್ಸು ಪಕ್ಷದ ಹೈಕಮಾಂಡ್, ಹಿರಿಯ ನಾಯಕರು ಮತ್ತು ನನ್ನ ತಂದೆಯವರಿಗೆ ಸಲ್ಲುತ್ತದೆ ಎಂದು ಹೇಳಿದರು.

SCROLL FOR NEXT