ರಾಜಕೀಯ

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ: ರೈತರ ಸಾಲ ಮನ್ನಾ ಸಂಬಂಧ ದೋಸ್ತಿಗಳ ಚರ್ಚೆ

Shilpa D
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸಮನ್ವಯ ಸಮಿತಿ ಸಭೆ ಇಂದು ನಡೆಯಲಿದ್ದು ರೈತರ ಸಾಲಮನ್ನಾ ಹಾಗೂ ನಿಗಮ-ಮಂಡಳಿಗಳ ನೇಮಕಾತಿ ಕುರಿತ ಸಂಬಂಧ  ಚರ್ಚೆ ನಡೆಸಲಾಗುವುದು.
ಸಿದ್ದರಾಮಯ್ಯ ಅವರ ನೇತೃತ್ವದ ಐವರು ಸದಸ್ಯರ ಸಮಿತಿಯು ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ರೂಪಿಸುವ ಕುರಿತು ಚರ್ಚಿಸಲಿದೆ ಎಂದು ಮೂಲಗಳು ತಿಳಿಸಿವೆ.
ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಆಲಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 
ಯಾವ ಜಿಲ್ಲೆ ಉಸ್ತುವಾರಿ ಯಾರಿಗೆ, ನಿಗಮ ಮಂಡಳಿಗಳಲ್ಲಿ ಯಾವ ಪಕ್ಷಕ್ಕೆಷ್ಟು ಸ್ಥಾನ, ಬಜೆಟ್ ಮತ್ತು ಸಾಮಾನ್ಯ ಕಾರ್ಯಕ್ರಮಗಳೇನಾಗಿರಬೇಕು, ರೈತರ ಸಾಲಮನ್ನಾ ವಿಷಯಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.
ಕಾಂಗ್ರೆಸ್ ಪರವಾಗಿ ಪರಮೇಶ್ವರ ಪಟ್ಟಿ ಮಾಡಿಕೊಂಡಿದ್ದು, ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಚರ್ಚಿಸಿದ್ದಾರೆ. ಕುಮಾರಸ್ವಾಮಿ ಅವರು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರ ಸಲಹೆ ಪಡೆದಿದ್ದಾರೆ.
ಜುಲೈ ಮೊದಲ ವಾರದಲ್ಲಿ ಬಜೆಟ್ ಮಂಡನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಕಾರ್ಯಕ್ರಮ, ಆದ್ಯತೆ ಕುರಿತು ಎರಡೂ ಪಕ್ಷದ ನಾಯಕರು ಅಭಿಪ್ರಾಯ ಮಂಡಿಸಲಿದ್ದಾರೆ.
ಸಮನ್ವಯ ಸಮಿತಿ ಸಭೆ ನಂತರ ಹಿರಿಯ ಕಾಂಗ್ರೆಸ್ ಮುಖಂಡರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ನೇಮಕಾತಿ ಸಂಬಂಧ ಚರ್ಚೆ ನಡಸಲಿದ್ದಾರೆ.
SCROLL FOR NEXT