ಮೈಸೂರು: ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮಂಡ್ಯ ಹಾಗೂ ಮೈಸೂರು ಭಾಗದಲ್ಲಿ ಜೆಡಿಎಸ್ ಮತ್ತೆ ಒಡೆದ ಮನೆಯಂತಾಗಿದೆ.
ಮಂಡ್ಯ ಹಾಗೂ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಭರ್ಜರಿ ಗೆಲುವು ಸಾಧಿಸಿದ್ದು, ಎಚ್ ಡಿ ಕುಮಾರಸ್ವಾಮಿ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಪಕ್ಷದ ಕಾರ್ಯಕರ್ತರು ಸಂಭ್ರಮ ಆಚರಿಸಿದ್ದರು. ಆದರೆ ಈ ಸಂಭ್ರಮ ಬಹಳ ದಿನ ಉಳಿದಿಲ್ಲ. ಅಧಿಕಾರ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಸಿಎಂ ಕುಮಾರಸ್ವಾಮಿ ಮತ್ತು ಪಕ್ಷದ ವರಿಷ್ಠ ಎಚ್ ಡಿ ದೇವೇಗೌಡ ಅವರು ಮಂಡ್ಯದಲ್ಲಿ ಎಲ್ಲಾ ಏಳು ಸ್ಥಾನಗಳ ಗೆಲುವಿಗೆ ಕಾರಣವಾಗಿರುವ ಸಚಿವರಾದ ಸಿಎಸ್ ಪುಟ್ಟರಾಜು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಜಿಟಿ ದೇವೇಗೌಡ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ಈ ಭಾಗದ ಬಹುತೇಕ ಜೆಡಿಎಸ್ ಕಾರ್ಯಕರ್ತರಿಗೆ ತೀವ್ರ ಅಸಮಾಧಾನ ಇದೆ.
ಜಿಟಿ ದೇವೇಗೌಡ ಮತ್ತು ಪುಟ್ಟರಾಜು ಅವರಿಗೆ ಒಳ್ಳೆಯ ಖಾತೆ ಸಿಗುತ್ತೆ ಎಂಬ ಭರವಸೆ ಇತ್ತು. ಆದರೆ ದೇವೇಗೌಡ ಅವರು ತಮ್ಮ ಸಂಬಂಧಿಗಳಿಗೆ ಅಂಟಿಕೊಂಡಿದ್ದು, ಪಕ್ಷದ ಗೆಲುವಿಗೆ ಕಾರಣರಾದ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದು ಜೆಡಿಎಸ್ ಮುಖಂಡ ಸೋಮಶೇಖರ್ ಅವರು ಆರೋಪಿಸಿದ್ದಾರೆ.
ಸಿಎಸ್ ಪುಟ್ಟರಾಜು ಅವರಿಗೆ ಸಣ್ಣ ನೀರಾವರಿ ಖಾತೆ ನೀಡಲಾಗಿದೆ. ಈ ಖಾತೆ ಅತ್ಯಂತ ಮಹತ್ವದ್ದು ಎನ್ನುವುದಾದರೆ ಕುಮಾರಸ್ವಾಮಿ ಅದನ್ನು ಎಚ್ ಡಿ ರೇವಣ್ಣ ಅವರಿಗೆ ನೀಡಬೇಕಿತ್ತು ಎಂದಿದ್ದಾರೆ.
ಇನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ವಿಚಾರದಲ್ಲೂ ಜೆಡಿಎಸ್ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಚುನಾವಣೆ ಪ್ರಚಾರದ ವೇಳೆ ದೇವೇಗೌಡ ಅವರು ಪುಟ್ಟರಾಜು ಅವರನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡುವುದಾಗಿ ಹೇಳಿದ್ದರು. ಈಗ ತಮ್ಮ ಸಂಬಂಧಿ ಡಿಸಿ ತಮ್ಮಣ್ಣ ಅವರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಿರುವುದು ದುರದೃಷ್ಟಕರ ಎಂದಿದ್ದಾರೆ.
ದೇವೇಗೌಡ ಮತ್ತು ಕುಮಾರಸ್ವಾಮಿ ಮೋಸಗಾರರು ಎಂಬ ಬಿಜೆಪಿ ಆರೋಪ ಈಗ ನಿಜವಾಗಿದೆ. ಪಕ್ಷ ಪುಟ್ಟರಾಜು ಅವರ ಸೇವೆಯನ್ನು ಪರಿಗಣಿಸಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು ಎಂದು ಮತ್ತೊಬ್ಬ ಜೆಡಿಎಸ್ ಮುಖಂಡ ಶಿವಳ್ಳಿ ಮಲ್ಲೇಗೌಡ ಅವರು ಒತ್ತಾಯಿಸಿದ್ದಾರೆ.
ಜಿಟಿ ದೇವೇಗೌಡ ಅವರು ಸಹ ತಮಗೆ ನೀಡಿರುವ ಉನ್ನತ ಶಿಕ್ಷಣ ಖಾತೆಯನ್ನು ನಿರಾಕರಿಸಿದ್ದು, ಸಹಕಾರ ಮತ್ತು ಎಪಿಎಂಸಿ ಖಾತೆ ನೀಡುವ ಭರವಸೆ ನೀಡಿದ್ದರೂ ಇದುವರೆಗೆ ಯಾವುದೇ ಖಾತೆ ನೀಡಿಲ್ಲ. ಹೀಗಾಗಿ ಮೈಸೂರಿನಲ್ಲೂ ಹಲವು ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics