ಬೆಂಗಳೂರು: ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್ ಹಿನ್ನಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಿ ಕೆ ಶಿವಕುಮಾರ್ ಶಿಕ್ಷೆಯನ್ನು ತಪ್ಪಿಸಲು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.
ಡಿ ಕೆ ಶಿವಕುಮಾರ್ ಅವರ ಬಂಧನ ಆಗುವ ಸಾಧ್ಯತೆಯಿದೆ ಎಂಬ ಸುದ್ದಿ ಹರಡುತ್ತಿರುವುದರಿಂದ ಸಚಿವರು ನಿನ್ನೆ ತಮ್ಮ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಕಾನೂನು ತಜ್ಞರ ಸಲಹೆ ಕೇಳಿದರು ಎಂದು ತಿಳಿದುಬಂದಿದೆ.
ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಚಿವ ಡಿಕೆಶಿ, ತಮಗೆ ಯಾವುದೇ ಸಮನ್ಸ್ ಬಂದಿಲ್ಲ. ದೆಹಲಿಯ ಕರ್ನಾಟಕ ಭವನದಲ್ಲಿರುವ ಆಂಜನೇಯ ಹನುಮಂತಯ್ಯ ಅವರ ಬಳಿ ಸಿಕ್ಕಿರುವ ಹಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಈ ಎಲ್ಲಾ ಬೆಳವಣಿಗೆಗಳು ನನಗೆ ಅಚ್ಚರಿಯನ್ನುಂಟುಮಾಡಿದೆ. ನನಗೆ ನ್ಯಾಯಾಂಗ ಮತ್ತು ನ್ಯಾಯಾಲಯದ ಮೇಲೆ ಸಂಪೂರ್ಣ ನಂಬಿಕೆಯಿದೆ ಎಂದರು. ತಾವು ಆಗಾಗ ದೆಹಲಿಗೆ ಭೇಟಿ ನೀಡುತ್ತಿದ್ದು ಅಲ್ಲಿ ಉಳಿದುಕೊಳ್ಳಲೆಂದು ಫ್ಲಾಟ್ ಖರೀದಿಸಿದ್ದೆ. ಯಾವುದೇ ಹವಾಲಾ ವ್ಯವಹಾರದಲ್ಲಿ ಭಾಗಿಯಾಗಿಲ್ಲ ಎಂದರು.
ಈ ಮಧ್ಯೆ ಸಚಿವ ಡಿ ಕೆ ಶಿವಕುಮಾರ್ ಪರ ನಿಂತಿರುವ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಡಿ ಕೆ ಶಿವಕುಮಾರ್ ಅವರನ್ನು ಗುರಿಯಾಗಿಟ್ಟುಕೊಂಡು ಹಲವು ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಸಿಬಿಐ, ಇಡಿ ಮತ್ತು ಐಆರ್ ನಂತಹ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಸರಿಯಲ್ಲ. ನಾವು ಶಿವಕುಮಾರ್ ಪರವಾಗಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.
ಅಕ್ರಮ ಆದಾಯ ಹೊಂದಿರುವ ರಾಜಕೀಯ ನಾಯಕರು ಶಿವಕುಮಾರ್ ಒಬ್ಬರೇ? ಐಟಿ ಇಲಾಖೆ ಅಧಿಕಾರಿಗಳು ಕಾಂಗ್ರೆಸ್ ನಾಯಕರನ್ನು ಮಾತ್ರ ತನಿಖೆ ಮಾಡುತ್ತಿದ್ದಾರೆಯೇ? ಅಕ್ರಮ ಆಸ್ತಿ ಮತ್ತು ಆದಾಯ ಹೊಂದಿರುವವರು ಬಿಜೆಪಿಯಲ್ಲಿ ಇಲ್ಲವೇ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.