ಬೆಂಗಳೂರು: ನೂತನ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಮುಂದಾಗಿರುವ ಸಂಬಂಧ ಮತ್ತು ರೈತರ ಸಾಲಮನ್ನಾ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಾಲಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಧ್ಯೆ ಭಿನ್ನಮತ ಏರ್ಪಟ್ಟಿರುವುದರಿಂದ ಬಿಕ್ಕಟ್ಟನ್ನು ಶಮನಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ಮಧ್ಯ ಪ್ರವೇಶಿಸಬೇಕೆಂದು ಜೆಡಿಎಸ್ ವರಿಷ್ಠ ದೇವೇಗೌಡರು ಬಯಸಿದ್ದಾರೆ.
ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯನವರು ಕೆಲ ದಿನಗಳ ಹಿಂದೆ ಬಜೆಟ್ ಮಂಡನೆಗೆ ಮತ್ತು ಸಾಲಮನ್ನಾ ವಿಚಾರದಲ್ಲಿ ನೀಡಿದ್ದ ಪ್ರತಿಕ್ರಿಯೆ ಮಾಧ್ಯಮಗಳಲ್ಲಿ ಪ್ರಸಾರವಾಗಿ ವೈರಲ್ ಆಗಿತ್ತು. ನಂತರ ಮತ್ತೊಂದು ವಿಡಿಯೊ ಕ್ಲಿಪ್ ಹೊರಬಂದಿದ್ದು ಅದರಲ್ಲಿ ಸಿದ್ದರಾಮಯ್ಯನವರು ಲೋಕಸಭೆ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ಇರುತ್ತದೋ ಅಥವಾ ಉರುಳುತ್ತದೋ ಎಂಬ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು ಸಮ್ಮಿಶ್ರ ಸರ್ಕಾರದ ನಾಯಕರಿಗೆ ಮುಜುಗರವನ್ನುಂಟುಮಾಡಿದೆ. ಸಮ್ಮಿಶ್ರ ಸರ್ಕಾರ ಸುಗಮವಾಗಿ ಆಡಳಿತ ನಡೆಸಲು ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಹೈಮಾಂಡ್ ಸ್ಪಷ್ಟ ಸೂಚನೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿಯವರ ಬಗ್ಗೆ ಸಿದ್ದರಾಮಯ್ಯನವರು ಮುನಿಸಿನ ಮಾತನಾಡಿ ಮೊದಲೇ ಮುಜುಗರಕ್ಕೀಡಾಗಿದ್ದ ಸಮ್ಮಿಶ್ರ ಸರ್ಕಾರದ ದೋಸ್ತಿಗೆ ಎರಡನೇ ವಿಡಿಯೊ ಬಿಡುಗಡೆಯಾಗಿದ್ದು ಮತ್ತಷ್ಟು ತುಪ್ಪ ಸುರಿದಿದೆ. ಲೋಕಸಭೆ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ಉಳಿಯುವುದು ಕಷ್ಟ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಮುಖ್ಯಸ್ಥರಾಗಿರುವ ಸಿದ್ದರಾಮಯ್ಯನವರು ಹೇಳಿರುವುದು ದೇವೇಗೌಡರಿಗೆ ಮತ್ತಷ್ಟು ಇರಿಸುಮುರುಸು ಮಾಡಿದೆ ಎನ್ನಲಾಗುತ್ತಿದೆ.
ಜೆಡಿಎಸ್ ಗೆ ಕೊಟ್ಟ ಮಾತು ತಪ್ಪುವುದಿಲ್ಲ: ಈ ಟೇಪು ಸೋರಿಕೆ ಸಿದ್ದರಾಮಯ್ಯನವರ ಬೆಂಬಲಿಗರ ಪೂರ್ವ ನಿಯೋಜಿತ ಎಂದು ಹೇಳಲಾಗುತ್ತಿದ್ದು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್ಚಿನ ಪ್ರಾಬಲ್ಯ ಗಳಿಸುವುದನ್ನು ಇಷ್ಟಪಡದೆ ಹೀಗೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಕೆಲ ದಿನಗಳ ಹಿಂದೆ ಕಾಂಗ್ರೆಸ್ ನ ಕೆಲ ಶಾಸಕರು ಸಿದ್ದರಾಮಯ್ಯನವರೊಡನೆ ಸಭೆ ನಡೆಸಿದ ಬಳಿಕ ಈ ವಿಡಿಯೊ ಹೊರಬಿದ್ದಿದೆ. ವಿಡಿಯೊದಲ್ಲಿ ಕೇಂದ್ರದಲ್ಲಿ ಮತ್ತೆ ಮೋದಿ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂದು ಸಿದ್ದರಾಮಯ್ಯನವರು ಹೇಳುತ್ತಿರುವುದು ಕೂಡ ಸೋರಿಕೆಯಾಗಿದೆ.
ಸಿದ್ದರಾಮಯ್ಯನವರು ಮಾತನಾಡಿರುವ ವಿಡಿಯೊ ಹೊರಬಿದ್ದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಸಮ್ಮಿಶ್ರ ಸರ್ಕಾರ 5 ವರ್ಷ ಪೂರ್ಣ ಅಧಿಕಾರ ನಡೆಸಲಿದೆ. ಜೆಡಿಎಸ್ ಗೆ ಕೊಟ್ಟ ಮಾತಿಗೆ ಬದ್ಧರಾಗಿದ್ದೇವೆ ಎಂದರು ಆದರೆ ಸಿದ್ದರಾಮಯ್ಯನವರು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರಿಂದ ಬರುತ್ತಿರುವ ಅಸಮಾಧಾನವನ್ನು ಕಾಂಗ್ರೆಸ್ ಹೈಕಮಾಂಡ್ ಶಮನಗೊಳಿಸಬೇಕೆಂದು ದೇವೇಗೌಡರು ಬಯಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ಸಿದ್ದರಾಮಯ್ಯನವರ ಜೊತೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಬೇಕೆಂದು ಕೋರಿದ್ದಾರೆ.