ಬೆಂಗಳೂರು: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಂಡಿಸುತ್ತಿರುವ ಪೂರ್ಣ ಪ್ರಮಾಣದ ಬಜೆಟ್ ಮತ್ತು ರೈತರ ಸಾಲಮನ್ನಾ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರ ವಿರೋಧದಿಂದ ರಾಜಕೀಯ ವಲಯದಲ್ಲಿ ಇದೀಗ ಬಿಸಿ ಬಿಸಿ ಚರ್ಚೆಯಾಗುತ್ತಿದೆ.
ಇದಕ್ಕೆ ಕಾಂಗ್ರೆಸ್ ನ ಪ್ರಭಾವಿ ನಾಯಕ ಹಾಗೂ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಿ ಕೆ ಶಿವಕುಮಾರ್ ತೀಕ್ಷ್ಮ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯನವರ ಹೇಳಿಕೆಯಿಂದ ಸರ್ಕಾರದ ಕಾರ್ಯವೈಖರಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.
ಸಿದ್ದರಾಮಯ್ಯನವರು ಮಾತನಾಡಿರುವ ವಿಡಿಯೊ ಕ್ಲಿಪ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಮ್ಮಿಶ್ರ ಸರ್ಕಾರದ ಬಗ್ಗೆ ಯಾರಿಗೂ ಸಹ ಹೇಳಿಕೆ ನೀಡಲು ಸಾಧ್ಯವಿಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್ ಅವರಿಗೆ ಮಾತ್ರ ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ ಮತ್ತು ಆಡಳಿತದ ಬಗ್ಗೆ ಮಾತನಾಡುವ ಹಕ್ಕು ಇರುವುದು ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದ್ದಾರೆ.
ಸಮ್ಮಿಶ್ರ ಸರ್ಕಾರದ ವಿರುದ್ಧ ಯಾರು ಹೇಳಿಕೆ ನೀಡಿದರೂ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಯಾರಾದರೂ ಏನಾದರೂ ಹೇಳಬೇಕೆಂದಿದ್ದರೆ ಅದನ್ನು ಪಕ್ಷದ ವೇದಿಕೆಯಲ್ಲಿ ಹೇಳಲಿ, ಅದು ಬಿಟ್ಟು ಮಾಧ್ಯಮಗಳ ಮುಂದೆ ಹೇಳುವುದಲ್ಲ. ಈ ನಿಯಮ ಪಕ್ಷದಲ್ಲಿರುವ ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ ಎಂದು ಬೆದರಿಕೆ ತುಸು ಕೋಪದಿಂದಲೇ ಹೇಳಿದರು.
ಮುಂದಿನ 5 ವರ್ಷಗಳ ಕಾಲ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರಕ್ಕೆ ಯಾರೂ ಹಾನಿ ಮಾಡುವ ಹಾಗಿಲ್ಲ. ನಾಯಕರು ಪಕ್ಷ ಆಧಾರಿತ ರಾಜಕಾರಣ ಮಾಡಬೇಕೇ ಹೊರತು ವೈಯಕ್ತಿಕ ರಾಜಕಾರಣ ಮಾಡಬಾರದು ಎಂದರು.