ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಬಯಸುವ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಸಾವಿರದ ಗಡಿ ದಾಟಿದೆ. ಕೆಪಿಸಿಸಿ ಕಚೇರಿಗೆ ಟಿಕೆಟ್ ಬಯಸಿ ಸಾವಿರಾರು ಅರ್ಜಿಗಳು ಬಂದಿವೆ. ಅದರಲ್ಲೂ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಬಯಸುವವವರ ಸಂಖ್ಯೆ ಹೆಚ್ಚಾಗಿದೆ.
ಬೆಂಗಳೂರಿನ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ 18 ಮಂದಿ ಟಿಕೆಟ್ ಆಕಾಂಕ್ಷಿಗಳು ಸ್ಪರ್ಧಿಸಬಯಸುತ್ತಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಕಳೆದ ತಿಂಗಳು 26ರಿಂದ ಚುನಾವಣೆಯಲ್ಲಿ ಸ್ಪರ್ಧಿಸಬಯಸುವವರಿಗೆ ಅರ್ಜಿ ನೀಡಲಾಗುತ್ತಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಈಗಾಗಲೇ 8 ಮಂದಿ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಕಾರಿಯ ಹಿರಿಯ ಅಧಿಕಾರಿಯೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ. ತಮ್ಮ ಮಗ ಹಲ್ಲೆ ನಡೆಸಿ ಜೈಲು ಪಾಲಾಗಿರುವ ಹಿನ್ನೆಲೆಯಲ್ಲಿ ಎನ್.ಎ.ಹಾರಿಸ್ ಶಾಸಕರಾಗಿರುವ ಶಾಂತಿನಗರ ವಿಧಾನಸಭಾ ಕ್ಷೇತ್ರ ಎಲ್ಲರ ಗಮನ ಸೆಳೆದಿದೆ. ಇಲ್ಲಿ ಇದುವರೆಗೆ ಯಾರೂ ಕೂಡ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿಲ್ಲ.
ಆದರೂ ನಿನ್ನೆ ಉನ್ನತ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ನಿನ್ನೆ ಶಾಂತಿನಗರ ಕ್ಷೇತ್ರದಲ್ಲಿ ಸ್ಪರ್ಧಿಸಬಯಸಲು ಕೋರಿ ಒಬ್ಬರು ಅರ್ಜಿ ಸ್ವೀಕರಿಸಿದ್ದಾರೆ.
ನಾಳೆಯವರೆಗೆ ಕೆಪಿಸಿಸಿ ಕಚೇರಿಯಲ್ಲಿ ಟಿಕೆಟ್ ನೀಡಲಾಗುತ್ತದೆ. ಮಾರ್ಚ್ 10 ತುಂಬಿದ ಅರ್ಜಿಗಳನ್ನು ಸಲ್ಲಿಸಲು ಕಡೆಯ ದಿನವಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನವನ್ನು ಮುಂದೂಡುವ ಸಾಧ್ಯತೆಯಿದೆ ಎಂದು ಕೆಪಿಸಿಸಿ ಕಾರ್ಯಕಾರಿ ತಿಳಿಸಿದೆ.
ಈ ಬಾರಿ ಮಹಿಳಾ ಟಿಕೆಟ್ ಆಕಾಂಕ್ಷಿಗಳು ಕೂಡ ಹೆಚ್ಚಾಗಿದ್ದಾರೆ. ಸಾಮಾನ್ಯ ವರ್ಗದಿಂದ 150 ಮಹಿಳೆಯರು ಅರ್ಜಿಗಳನ್ನು ಈಗಾಗಲೇ ಸ್ವೀಕರಿಸಿದ್ದಾರೆ. ಎಸ್ .ಸಿ ಮತ್ತು ಎಸ್.ಟಿ ಸಮುದಾಯದಿಂದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಮಾಜಿ ಮತ್ತು ಹಾಲಿ ಶಾಸಕರು ಕೊನೆಯ ದಿನಕ್ಕಿಂತ ಒಂದೆರಡು ದಿನ ಮೊದಲು ಅರ್ಜಿಗಳನ್ನು ಸ್ವೀಕರಿಸುವ ಸಾಧ್ಯತೆಯಿರುವುದರಿಂದ ಇದುವರೆಗೆ ಬಂದ ಬಹುತೇಕ ಅರ್ಜಿಗಳು ಮೊದಲ ಬಾರಿಗೆ ಸ್ಪರ್ಧಿಸುವವರಾಗಿದ್ದಾರೆ.
ಪ್ರತಿ ಅರ್ಜಿಗೆ 100 ರೂ.ಬೆಲೆ ನಿಗದಿಪಡಿಸಲಾಗಿದ್ದು, ಸಚಿವರುಗಳಿಗೆ 1 ಲಕ್ಷ, ಶಾಸಕರಿಗೆ, ವಿಧಾನಪರಿಷತ್ ಸದಸ್ಯರಿಗೆ, ಸಂಸದರಿಗೆ 50,000 ಹಾಗೂ ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಸಂಸದರಿಗೆ 25,000 ರೂ.ಹಾಗೂ ಸಾಮಾನ್ಯ ವರ್ಗದವರಿಗೆ 20,000 ರೂ. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ 15,000 ರೂಪಾಯಿ ನಿಗದಿಪಡಿಸಲಾಗಿದೆ.
ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಅರ್ಜಿಗಳ ಸ್ವೀಕರಿಕೆಯಿಂದ ಸಂಗ್ರಹವಾದ ಹಣವನ್ನು ಕೆಪಿಸಿಸಿ ಕೇಂದ್ರ ಕಚೇರಿಯ ಅನ್ನೆಕ್ಸೆ ಕಟ್ಟಡ ನಿರ್ಮಾಣ ಪೂರ್ಣಗೊಳಿಸಲು ಬಳಸಲಾಗುವುದು ಎಂದು ಸಮರ್ಥಿಸಿಕೊಂಡರು.