ರಾಜಕೀಯ

ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Lingaraj Badiger
ನವದೆಹಲಿ: ಮಾರ್ಚ್ 23ರಂದು ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್ ಭಾನುವಾರ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ದಲಿತ ಮತ್ತು ಒಕ್ಕಲಿಗ ಮತ್ತು ಮುಸ್ಲಿಂ ನಾಯಕರಿಗೆ ಆದ್ಯತೆ ನೀಡಲಾಗಿದೆ.
ದಲಿತ ನಾಯಕ ಹಾಗೂ ಕೆಪಿಸಿಸಿ ಮುಖಂಡ ಎಲ್ ಹನುಮಂತಯ್ಯ, ಒಕ್ಕಲಿಗ ನಾಯಕ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜೆಸಿ ಚಂದ್ರಶೇಖರ್ ಮತ್ತು ಬಳ್ಳಾರಿಯ ನಾಸಿರ್ ಹುಸೇನ್ ಅವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಇಂದು ಅಧಿಕೃತವಾಗಿ ಘೋಷಿಸಿದೆ.
ಕಾಂಗ್ರೆಸ್ ನ ಈ ಮೂವರು ಅಭ್ಯರ್ಥಿಗಳು ನಾಳೆ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ.
ರಾಜ್ಯಸಭಾ ಸದಸ್ಯರಾಗಿರುವ ಕಾಂಗ್ರೆಸ್‍ ನ ಎಂ.ರೆಹಮಾನ್ ಖಾನ್, ಬಿಜೆಪಿಯ ಬಸವರಾಜ ಪಾಟೀಲ್, ರಂಗಸಾಯಿ ರಾಮಕೃಷ್ಣ ಮತ್ತು ಪಕ್ಷೇತರರಾದ ರಾಜೀವ್ ಚಂದ್ರಶೇಖರ್ ಏಪ್ರಿಲ್ 2ರಂದು ನಿವೃತ್ತಿ ಹೊಂದುತ್ತಿದ್ದಾರೆ. ನಿವೃತ್ತಿಯಿಂದ ತೆರವಾಗುವ ಈ ನಾಲ್ಕು ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದು , ಮಾರ್ಚ್ 23ರಂದು ಮತದಾನದ ದಿನಾಂಕ ನಿಗದಪಡಿಸಿದೆ. 
224 ಶಾಸಕರ ಬಲ ಹೊಂದಿರುವ ವಿಧಾನಸಭೆಯಲ್ಲಿ ಏಳು ಸ್ಥಾನಗಳು ಖಾಲಿ ಉಳಿದಿವೆ. ಕಾಂಗ್ರೆಸ್ 122, ಬಿಜೆಪಿ 43, ಜೆಡಿಎಸ್ 37, ಬಿಎಸ್‍ಆರ್ 3, ಕೆಜೆಪಿ 2, ಕೆಎಂಪಿ 1, ಪಕ್ಷೇತರರು 8 ಹಾಗೂ ಸಭಾಧ್ಯಕ್ಷರನ್ನು ಒಳಗೊಂಡಂತೆ 217 ಶಾಸಕರಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನ ಶಾಸಕರ ಸಂಖ್ಯಾ ಬಲದ ಮೇಲೆ ಎರಡು ರಾಜ್ಯಸಭಾ ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದು. ಮೂರನೇಯ ಸ್ಥಾನ ಗೆಲ್ಲಬೇಕಾದರೆ ಪಕ್ಷೇತರರ ಹಾಗೂ ಜೆಡಿಎಸ್ ಶಾಸಕರ ಬೆಂಬಲ ಅಗತ್ಯವಿದೆ.
SCROLL FOR NEXT