ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ
ಬೆಂಗಳೂರು: ಕಳೆದ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ನಾಯಕತ್ವಕ್ಕೆ ಸೆಡ್ಡುಹೊಡೆದು ಅಡ್ಡಮತದಾನ ಮಾಡಿದ್ದ 7 ಮಂದಿ ಬಂಡಾಯ ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಜೆಡಿಎಸ್ ಮುಂದಾಗಿದೆ.
ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ಬಂಡಾಯ ಶಾಸಕರ ಅನರ್ಹತೆ ಕೋರಿ ಹೈಕೋರ್ಟ್ ಮೆಟ್ಟಿಲೇರಲು ಜೆಡಿಎಸ್ ತೀರ್ಮಾನಿಸಿದೆ.
2016ರಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಶಾಸಕರಾದ ಎನ್. ಚೆಲುವರಾಯಸ್ವಾಮಿ, ಅಖಂಡ ಶ್ರೀನಿವಾಸ ಮೂರ್ತಿ, ಜಮೀರ್ ಅಹ್ಮದ್ ಖಾನ್, ಹೆಚ್.ಸಿ.ಬಾಲಕೃಷ್ಣ, ರಮೇಶ್ ಬಂಡಿಸಿದ್ದೇಗೌಡ, ಇಕ್ಬಾಲ್ ಅನ್ಸಾರಿ ಮತ್ತು ಭೀಮಾ ನಾಯಕ್ ವಿರುದ್ಧ ಕ್ರಮಕ್ಕಾಗಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವುದಾಗಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರು ಹೇಳಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ನೀಡದೇ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿದ್ದರಿಂದಾಗಿ ಅವರ ವಿರುದ್ಧ ವಿಧಾನಸಭಾ ಸ್ಪೀಕರ್ ಗೆ ದೂರು ನೀಡಲಾಗಿತ್ತು. ಆದರೆ, ಸ್ಪೀಕರ್ ಇಲ್ಲಿಯವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯಸಭಾ ಚುನಾವಣೆ ಬಳಿಕ ಜೆಡಿಎಸ್ ನ 7 ಬಂಡಾಯ ಶಾಸಕರು ಇದೇ ಮಾ.25ರಂದು ಮೈಸೂರಿನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಸಿದ್ಧತೆಗಳನ್ನು ನಡೆಸುತ್ತಿದ್ದು, ಈ ನಡುವೆ ದೇವೇಗೌಡ ಅವರ ಈ ನಡೆ ಹಲವು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ.