ರಾಜಕೀಯ

ಪ್ರತ್ಯೇಕ ಧರ್ಮಕ್ಕೆ ಶಿಫಾರಸು 'ಅನ್ಯಾಯದ ಪರಮಾವಧಿ': ಶಾಮನೂರು ಶಿವಶಂಕರಪ್ಪ

Lingaraj Badiger
ದಾವಣಗೆರೆ: ರಾಜ್ಯ ಸರ್ಕಾರ ವೀರಶೈವ, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡಲು ನಿರ್ಧರಿಸಿರುವುದು 'ಅನ್ಯಾಯದ ಪರಮಾವಧಿ' ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರು ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ತಮ್ಮ ನಿವಾಸದಲ್ಲಿ ನಡೆದ ಮಠಾಧೀಶರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಮನೂರು ಶಿವಶಂಕರಪ್ಪ ಅವರು, ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಕಲ್ಪಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಸೋಮವಾರ ಕೈಗೊಂಡಿರುವ ತೀರ್ಮಾನ ಮೇಲ್ನೋಟಕ್ಕೆ ಅನ್ಯಾಯದಂತೆ ಕಾಣಿಸುತ್ತಿದೆ ಎಂದಿದ್ದಾರೆ.
ಲಿಂಗಾಯತ ಹಾಗೂ ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರೆ ಸಂತಸವಾಗುತ್ತಿತ್ತು. ಆದರೆ, ‘ಬಸವತತ್ವ ಒಪ್ಪಿತ’ ಎಂಬ ಅಂಶ ಸೇರಿಸಿರುವುದು ಸರಿಯಲ್ಲ. ಬಸವಣ್ಣನ ತತ್ವಗಳನ್ನು ಒಪ್ಪುವುದು ಬಿಡುವುದು ಅವರವರಿಗೆ ಬಿಟ್ಟ ವಿಚಾರ ಎಂದು ವಾಗ್ದಾಳಿ ನಡೆಸಿದರು.
ವೀರಶೈವ ಅತ್ಯಂತ ಪ್ರಾಚೀನ ಧರ್ಮ. ಆದರೆ, ಸರ್ಕಾರದ ಶಿಫಾರಸಿನ ಪ್ರಕಾರ 12ನೇ ಶತಮಾನಕ್ಕಿಂತ ಮುಂಚಿತವಾಗಿ ಇರಲೇ ಇಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಪಂಚಾಚಾರ್ಯರು ಹುಟ್ಟುಹಾಕಿದ ವೀರಶೈವ ಧರ್ಮ ಪ್ರಾಚೀನವಾದುದು. ವೀರಶೈವ ಹಾಗೂ ಲಿಂಗಾಯತ ಎರಡೂ ಒಂದೇ ಎಂಬ ನಿರ್ಧಾರಕ್ಕೆ ಈಗಲೂ ಬದ್ಧವಾಗಿದ್ದು, ಸರ್ಕಾರದ ನಿರ್ಧಾರವನ್ನು ಒಪ್ಪುವ ಪ್ರಶ್ನೆಯೇ ಇಲ್ಲ ಎಂದರು.
SCROLL FOR NEXT