ಚಿಕ್ಕಮಗಳೂರು: ಅವಕಾಶ ಸಿಕ್ಕಾಗಲೆಲ್ಲಾ ಪ್ರಧಾನಿ ಮೋದಿ ಅವರನ್ನು ಟೀಕಿಸುವ ರಾಹುಲ್ ಗಾಂಧಿ ಚಿಕ್ಕಮಗಳೂರಿನಲ್ಲಿ ನಡೆದ ಜನಾಶೀರ್ವಾದ ರ್ಯಾಲಿಯಲ್ಲಿ ಜಿಲ್ಲೆಗೂ ತನ್ನ ಅಜ್ಜಿ ಇಂದಿರಾ ಗಾಂಧಿಗೂ ಇರುವ ಭಾವನಾತ್ಮಕ ಸಂಬಂಧದ ಬಗ್ಗೆ ಸ್ಮರಿಸಿದರು.
ನನ್ನ ಅಜ್ಜಿಯ ಕಷ್ಟದ ದಿನಗಳಲ್ಲಿ ನೀವು ಸಹಾಯ ಮಾಡಿದ್ದೀರಿ. ರಾಜಕೀಯ ವಿರೋಧಿಗಳು ಅವರನ್ನು ಸೋಲಿಸಲು ಪ್ರಯತ್ನಿಸಿದಾಗ ಅವರ ಜೊತೆ ನೀವು ನಿಂತು ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದೀರಿ. ಅಂತಹ ಸ್ಥಳಕ್ಕೆ ನಾನಿಂದು ಬಂದಿದ್ದೇನೆ, ಚಿಕ್ಕಮಗಳೂರಿಗೆ ಬಂದಿರುವುದು ನನಗೆ ಅತೀವ ಸಂತೋಷ ನೀಡಿದೆ, ನೀವು ಮಾಡಿರುವ ಉಪಕಾರವನ್ನು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸ್ಮರಿಸಿಕೊಂಡರು.
ನನ್ನ ಅಜ್ಜಿ ಇಂದಿರಾ ಗಾಂಧಿಯವರನ್ನು ರಾಜಕೀಯವಾಗಿ ದಮನ ಮಾಡುವ ಸಂದರ್ಭದಲ್ಲಿ ಐತಿಹಾಸಿಕ ಗೆಲುವು ನೀಡಿ ನೀವು ಅವರನ್ನು ಗೆಲ್ಲಿಸಿದ್ದೀರಿ. ಇಂದು ನಿಮ್ಮಲ್ಲಿ ಮತ್ತೊಮ್ಮೆ ನಾನು ಬಂದು ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ಬಿಜೆಪಿ, ಆರ್ ಎಸ್ಎಸ್ ನವರು ದೇಶವನ್ನು ಒಡೆದು ಆಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
14 ವರ್ಷದ ಬಾಲಕನಿಗೆ ಕೇಳಿದರೂ ಧರ್ಮದ ಬಗ್ಗೆ ಅರ್ಥ ಮಾಡಿಕೊಳ್ಳುತ್ತಾನೆ, ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧರ್ಮದ ಬಗ್ಗೆ ಏನೂ ಗೊತ್ತಿಲ್ಲ ಎಂದು ವ್ಯಂಗ್ಯ ವಾಡಿದ್ದಾರೆ. ಶೃಂಗೇರಿ ಮಠಕ್ಕೆ ಭೇಟಿ ನೀಡಿದಾಗ ಅಲ್ಲಿ ಬಾಲಕನೊಬ್ಬನ ಬಳಿ ಧರ್ಮದ ಬಗ್ಗೆ ಕೇಳಿದಾಗ ಆತ ನೀಡಿದ ವಿವರಣೆ ನೀಡಿ ಆಶ್ಚರ್ಯವಾಯಿತು. ಧರ್ಮ ಎಂದರೇ ಸತ್ಯಮೇವ ಜಯತೇ ಎಂದು ಹೇಳಿದ.
ಧರ್ಮದ ಬಗ್ಗೆ ಗೊತ್ತಿಲ್ಲದ ಪ್ರದಾನಿ ಮೋದಿ ಪದೇ ಪದೇ ಸುಳ್ಳು ಹೇಳುತ್ತಿದ್ದಾರೆ. ಕಳೆದ 60 ವರ್ಷಗಳಲ್ಲಿ ದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಮೋದಿ ಆರೋಪಿಸಿದ್ದಾರೆ, ಅಂದರೇ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗಲೂ ಕೂಡ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ ಎಂದು ಅರ್ಥವೇ ಎಂದು ಪ್ರಶ್ನಿಸಿದ್ದಾರೆ.