ಬೆಂಗಳೂರು: ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಿದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗಂಭೀರ ಪರಿಣಾಮ ಎದುರಿಸಬೇಕಾಗಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಇದು ಸಮುದಾಯವನ್ನು ಒಡೆಯಲು ಸರ್ಕಾರ ಮಾಡುತ್ತಿರುವ ಪ್ರಯತ್ನವೇ ಹೊರತು ಬೇರೆ ಯಾವ ಪ್ರಯೋಜನ ಕೂಡ ಇಲ್ಲ ಎಂಬುದು ಲಿಂಗಾಯತ ಸಮುದಾಯದವರಿಗೆ ಅರಿವಾಗಿದೆ.
ವೀರಶೈವ ಮಹಾಸಭಾ ಮುಖ್ಯಮಂತ್ರಿಯವರಿಗೆ ಘೇರಾವ್ ಹಾಕಲು ಪ್ರಯತ್ನಿಸಿದರೆ ಅವರಿಗೆ ರಾಜ್ಯಾದ್ಯಂತ ತಿರುಗಾಡಲು ಕಷ್ಟವಾಗಬಹುದು. ವೀರಶೈವ ಲಿಂಗಾಯತ ಸಮುದಾಯದ ಕೆಂಗಣ್ಣಿಗೆ ಮುಖ್ಯಮಂತ್ರಿಯವರು ಗುರಿಯಾಗಬೇಕಾಗಬಹುದು ಎಂದು ಯಡಿಯೂರಪ್ಪನವರು ನಿನ್ನೆ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಅವರು ನಿನ್ನೆ ತುಮಕೂರಿನಲ್ಲಿ ಗೊಲ್ಲ ಸಮುದಾಯದ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಲಿಂಗಾಯತ ಸಮುದಾಯದ ಪ್ರತ್ಯೇಕ ಧರ್ಮ ವಿಚಾರವನ್ನು ರಾಜ್ಯ ಸರ್ಕಾರ ಮಹಾಸಭಾ ಮತ್ತು ಮಠದ ಸ್ವಾಮೀಜಿಗಳ ನಿರ್ಧಾರಕ್ಕೆ ಬಿಟ್ಟಿದೆ. ಆರಂಭದಿಂದಲೂ ನಮ್ಮ ಪಕ್ಷದ ನಿಲುವು ಸ್ಪಷ್ಟವಾಗಿದೆ. ಮಹಾಸಭಾ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ರಾಜ್ಯ ಸರ್ಕಾರ ಈ ಧಾರ್ಮಿಕ ವಿಚಾರವನ್ನು ಮಹಾಸಭಾ ಮತ್ತು ಶ್ರೀಗಳ ನಿರ್ಧಾರಕ್ಕೆ ಬಿಡಬೇಕಾಗಿತ್ತು ಎಂದಿದ್ದಾರೆ.
ಇನ್ನೊಂದೆಡೆ ಜೆಡಿಎಸ್ ಕೂಡ ಇದೇ ನಿಲುವನ್ನು ಹೊಂದಿದೆ. ವೀರಶೈವ ಮತ್ತು ಲಿಂಗಾಯತವನ್ನು ಪ್ರತ್ಯೇಕಿಸಿರುವುದರ ಹಿಂದೆ ರಾಜಕೀಯ ಲಾಭದ ಉದ್ದೇಶವಿದೆ. ಈ ನಿರ್ಧಾರದಿಂದ ದೂರವಿರಲು ನಮ್ಮ ಪಕ್ಷ ತೀರ್ಮಾನಿಸಿದೆ ಎಂದು ಜೆಡಿಎಸ್ ವಕ್ತಾರ ಮತ್ತು ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಹೇಳಿದ್ದಾರೆ.
ಆದರೆ ಸರ್ಕಾರಕ್ಕೆ ಇಂತಹ ಯಾವುದೇ ರಾಜಕೀಯ ಲಾಭ ಉದ್ದೇಶವಿಲ್ಲ. ಮಹಾಸಭಾದ ಮನವಿಯಂತೆ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಲಿಂಗಾಯತ ಮತ್ತು ವೀರಶೈವರನ್ನು ಪ್ರತ್ಯೇಕಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ವೀರಶೈವರನ್ನು ನಾವು ಹೊರಹಾಕಿಲ್ಲ ಎಂದು ಗಣಿ ಇಲಾಖೆ ಸಚಿವ ವಿನಯ್ ಕುಲಕರ್ಣಿ ತಿಳಿಸಿದ್ದಾರೆ.