ರಾಜಕೀಯ

ಮೈಸೂರು ರಾಜವಂಶಸ್ಥರೊಂದಿಗೆ ಮಾತುಕತೆಯ ವಿವರ ನೀಡಲು ಅಮಿತ್ ಶಾ ನಕಾರ

Lingaraj Badiger
ಮೈಸೂರು: ಮೈಸೂರು ರಾಜವಂಶಸ್ಥರೊಂದಿಗೆ ನಡೆಸಿದ ಮಾತುಕತೆಯ ವಿವರ ನೀಡಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಶನಿವಾರ ನಿರಾಕರಿಸಿದ್ದಾರೆ.
ನಿನ್ನೆಯಷ್ಟೇ ಮೈಸೂರು ಅರಮನೆಗೆ ಭೇಟಿ ನೀಡಿದ್ದ ಅಮಿತ್ ಶಾ, ರಾಜಮಾತೆ ಪ್ರಮೋದಾದೇವಿ ಹಾಗೂ ಯದುವೀರ್​ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಮಾತುಕತೆಯ ವಿವರ ನೀಡಲು ಅಮಿತ್ ಶಾ ನಿರಾಕರಿಸಿದ್ದು, ಕೇವಲ ಔಪಚಾರಿಕ ಭೇಟಿ ಎಂದಷ್ಟೇ ಹೇಳಿದ್ದಾರೆ.
ಮೈಸೂರು ಭಾಗದಲ್ಲಿ ಬಿಜೆಪಿ ಪರ ಮತ ಯಾಚಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಯದುವೀರ್ ಅವರನ್ನು ಕೇಳಿಕೊಂಡಿದ್ದು, ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪರ ಪ್ರಚಾರ ಮಾಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲದ ಕಾರಣ ಅವರನ್ನು ಈ ಬಾರಿಯ ವಿಧಾನಸಭೆ ಚುನಾವಣೆಗೆ ಸ್ಟಾರ್ ಪ್ರಚಾರಕರಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆಂದು ತಿಳಿದು ಬಂದಿದೆ.
ಪ್ರಮೋದಾದೇವಿ ಒಡೆಯರ್ ಅವರಿಗೆ ರಾಜ್ಯಸಭಾ ಸದಸ್ಯತ್ವ ನೀಡುವ ಬಗ್ಗೆಯೂ ಮಾತನಾಡಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ. ರಾಜ್ಯ ಸರ್ಕಾರ ಒಡೆಯರ್ ಕುಟುಂಬದವರಿಗೆ ಆಸ್ತಿ-ಪಾಸ್ತಿ ಸೇರಿದಂತೆ ಕೆಲವು ಸಮಸ್ಯೆಗಳನ್ನು ತಂದೊಡ್ಡಿದೆ ಎಂದೂ ಇವುಗಳನ್ನು ಬಗೆಹರಿಸುವ ಕುರಿತು ಶಾ ಪ್ರಮೋದಾದೇವಿಯವರೊಂದಿಗೆ ಮಾತುಕತೆ ನಡೆಸಿದರೆಂದು ಹೇಳಲಾಗಿದೆ. 
SCROLL FOR NEXT