ಬೆಂಗಳೂರು: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕೇಂದ್ರದ ಅನುದಾನಕ್ಕೆ ಸಂಬಂಧಿಸಿದಂತೆ ಸಿಲ್ಲಿ ಪ್ರಶ್ನೆಗಳನ್ನು ಕೇಳುವ ಮೂಲಕ ಕನ್ನಡಿಗರನ್ನು ಮಾತ್ರವಲ್ಲದೆ, ವಿಧಾನಸಭೆ ಮತ್ತು ವಿಧಾನಪರಿಷತ್ ಪ್ರತಿಪಕ್ಷ ನಾಯಕರನ್ನು ಅವಮಾನಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರದಿಂದ ಪಡೆದ ಪ್ರತಿಯೊಂದು ರುಪಾಯಿಗೂ ನಾನು ವಿಧಾನಸಭೆಗೆ ಲೆಕ್ಕ ನೀಡಿದ್ದೇನೆ. ಈ ಬಗ್ಗೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ಸಂಪೂರ್ಣ ಅರಿವಿದೆ ಎಂದು ಮೋದಿ ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ಹೆಚ್ಚು ಅನುದಾನ ಕೊಟ್ಟಿದ್ದೇವೆ ಎಂದು ಹೇಳಿದ್ದ ಅಮಿತ್ ಶಾಗೆ ಸಿಎಂ ತಿರುಗೇಟು ನೀಡಿದ್ದಾರೆ.
13 ಮತ್ತು 14ನೇ ಹಣಕಾಸು ಆಯೋಗಗಳ ನಡುವೆ ಹೋಲಿಕೆ ಮಾಡುವುದು ಸರಿಯಲ್ಲ. ಎರಡೂ ವಿಭಿನ್ನ ಕಾಲಘಟ್ಟದವು. ಹಣದುಬ್ಬರ, ತೆರಿಗೆ ಹೆಚ್ಚಳ ಇತ್ಯಾದಿ ಕಾರಣಗಳಿಂದ ಪ್ರತೀ ವರ್ಷ ಶೇ.10-15ರಷ್ಟು ಆದಾಯ ಹೆಚ್ಚಳವಾಗುತ್ತದೆ. ಹೀಗಾಗಿ, 13ನೇ ಹಣಕಾಸು ಆಯೋಗಕ್ಕಿಂತ 14ನೇ ಹಣಕಾಸು ಆಯೋಗದಲ್ಲಿ ಅನುದಾನ ಹೆಚ್ಚಳವಾಗಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
13ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ 88,583 ಕೋಟಿ ರು. ಅನುದಾನ ಸಿಕ್ಕಿದೆ. 14ನೇ ಆಯೋಗದಲ್ಲಿ ಇದು 2,19,506 ಕೋಟಿ ರುಗೆ ಹೆಚ್ಚಳವಾಗಿದೆ. ಇಷ್ಟು ಹಣ ಎಲ್ಲಿ ಹೋಯಿತು, ಲೆಕ್ಕಕೊಡಿ ಎಂದು ಅಮಿತ್ ಶಾ ನೀಡಿದ ಹೇಳಿಕೆಗೆ ಸಿದ್ದರಾಮಯ್ಯ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಅಮಿತ್ ಶಾ ಅವರು ಇಂತಹ ಸಿಲ್ಲಿ ಪ್ರಶ್ನೆಗಳನ್ನು ಕೇಳುವ ಮೂಲಕ ಕರ್ನಾಟಕದ ಜನರನ್ನಷ್ಟೇ ಅಲ್ಲ, ರಾಜ್ಯದ ಎರಡೂ ಸದನಗಳ ಪ್ರತಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್ ಮತ್ತು ಕೆ.ಎಸ್.ಈಶ್ವರಪ್ಪ ಅವರನ್ನೂ ಅವಮಾನಿಸುತ್ತಿದ್ದಾರೆ. ಇಷ್ಟು ವರ್ಷ ಅವರು ಈ ಲೆಕ್ಕ ಕೇಳಲೇ ಇಲ್ಲವೆಂದು ನೀವು ಹೇಳಿದಂತಾಗಿದೆ... ಈ 5 ವರ್ಷ ಕರ್ನಾಟಕ ಬಿಜೆಪಿ ಮಲಗಿತ್ತೆಂದು ಹೇಳುತ್ತೀರಾ? 15 ವಿಧಾನಸಭಾ ಅವಧಿಯಲ್ಲಿ ಈ ಲೆಕ್ಕಗಳನ್ನು ಪ್ರಸ್ತುತಪಡಿಸಿದಾಗ, ಚರ್ಚೆ ನಡೆಸಿದಾಗ, ಅನುಮೋದನೆ ಮಾಡಿದಾಗ ಈ ಬಿಜೆಪಿ ಮುಖಂಡರು ಮಲಗಿಕೊಂಡಿದ್ದರೆಂದು ಭಾವಿಸಿದ್ದೀರಾ? ದಯಮಾಡಿ ಜನರನ್ನು ಮೂರ್ಖರನ್ನಾಗಿಸುವುದನ್ನು ನಿಲ್ಲಿಸಿರಿ. ಪದೇಪದೆ ಸುಳ್ಳು ಹೇಳಿದರೆ ಅದು ಸತ್ಯವಾಗುವುದಿಲ್ಲ ಎಂದ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯಕ್ಕೆ ವಿಶೇಷ ಅನುದಾನವೇನು ನೀಡಿಲ್ಲ. ಎಲ್ಲಾ ರಾಜ್ಯಗಳಿಗೆ ನೀಡಿದಂತೆ ನಮ್ಮ ಹಕ್ಕಿನ ಮೇಲೆ ಕರ್ನಾಟಕಕ್ಕೆ ಅನುದಾನ ಬಂದಿದೆಯಷ್ಟೇ. ಈ ಅನುದಾನವು ನಮ್ಮ ರಾಜ್ಯದ ಬಜೆಟ್ಗೆ ಸೇರ್ಪಡೆಯಾಗುತ್ತದೆ. ನಾನು ಸುಮಾರು 9 ಲಕ್ಷ ಕೋಟಿ ರು.ಗಳ 5 ಬಜೆಟ್ಗಳನ್ನು ಮಂಡಿಸಿದ್ದೇನೆ. ರಾಜ್ಯಕ್ಕೆ ಎಷ್ಟು ಅನುದಾನ ನೀಡಬೇಕೆಂದು ನಿರ್ಧರಿಸುವುದು ಹಣಕಾಸು ಆಯೋಗ. ಅದನ್ನು ಯುಪಿಎ ಸರ್ಕಾರವಾಗಲಿ, ಎನ್ಡಿಎ ಸರ್ಕಾರವಾಗಲೀ ಮಾಡುವುದಿಲ್ಲ. 1950ರಿಂದಲೂ ಈ ನೀತಿ ಜಾರಿಯಲ್ಲಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos