ಶಿವಮೊಗ್ಗ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಆಣತಿಯಂತೇ ಜನಾರ್ಧನ ರೆಡ್ಡಿ ಪಕ್ಷದ ಪ್ರಚಾರ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಪಕ್ಷದ ಅಭ್ಯರ್ಥಿ ಕೆಎಸ್ ಈಶ್ವರಪ್ಪ ಪರ ಪ್ರಚಾರ ನಡೆಸಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್ ವೈ, ಬಳ್ಳಾರಿ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಜನಾರ್ಧನರೆಡ್ಡಿ ಅವರ ಸಹಕಾರ ಪಡೆಯುತ್ತಿದ್ದೇವೆ. ರೆಡ್ಡಿ ಅವರ ಸಹಕಾರ ಪಡೆಯುವಂತೆ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಹ ಸಲಹೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಜನಾರ್ಧನ ರೆಡ್ಡಿ ಸಹಾಯ ಪಡೆದು ಪಕ್ಷದ ಪರ ಪ್ರಚಾರ ನಡೆಸಿದರೆ ತಪ್ಪೇನಿಲ್ಲ. ಮೂರ್ನಾಲ್ಕು ಜಿಲ್ಲೆಗಳಲ್ಲಿ ಅವರು ಪ್ರಚಾರ ನಡೆಸಿದರೆ ಪಕ್ಷಕ್ಕೆ ಆನೆ ಬಲ ಬರತ್ತದೆ. ಹೈಕಮಾಂಡ್ ಇದರ ಬಗ್ಗೆ ಯಾವ ಸೂಚನೆಯನ್ನು ಕೊಟ್ಟಿಲ್ಲ. ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಕೇವಲ ಊಹಾಪೋಹ. ಯಾವುದೇ ಕಾರಣಕ್ಕೂ ನಾವು ಅವರ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಬಿಜೆಪಿಯೇ ಸ್ಪಷ್ಟ ಬಹುಮತದ ಮೂಲಕ ಅಧಿಕಾರ ಹಿಡಿಯುವಾಗ ಬೇರೆ ಪಕ್ಷದವರ ಅಗತ್ಯವೇ ಇಲ್ಲ ಎಂದು ಹೇಳಿದರು. ಅಂತೆಯೇ ಮಾಜಿ ಪ್ರಧಾನಿ ದೇವೇಗೌಡರ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಅವರು ಮಾಜಿ ಪ್ರಧಾನಿಗಳು. ಹಾಗಾಗಿ ಪ್ರಶಂಸಿಸಿರಬಹುದು. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.
ಕಾಂಗ್ರೆಸ್ಸಿಗರಿಂದಲೇ ಸಿದ್ದುಗೆ ಸೋಲು
ಕಳೆದ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರನ್ನು ಸೋಲಿಸಿದಂತೆ ಈ ಬಾರಿ ಅವರ ಪಕ್ಷದವರೇ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸೋಲಿಸಲಿದ್ದಾರೆ. ಕಳೆದ ಚುನಾವಣೆಯಲ್ಲಿ ಜಿ.ಪರಮೇಶ್ವರ್ ಸೋಲಿಗೆ ಕೊರಟಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದವರೇ ಅವರಿಗೆ ವಿರುದ್ಧವಾಗಿ ಕೆಲಸ ಮಾಡಿದ್ದರು. ಅದೇ ತಂತ್ರ ಈ ಬಾರಿ ಸಿದ್ದರಾಮಯ್ಯನವರಿಗೆ ಆಗಲಿದೆ. ಎರಡೂ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿಯನ್ನು ಸೋಲಿಸುವ ಹುನ್ನಾರಗಳು ನಡೆದಿವೆ. ಸಿಎಂ ಆಗುವ ಆಸೆಯಿಂದ ಮತ್ತೊಬ್ಬ ನಾಯಕನ ಸೋಲಿಗೆ ತಂತ್ರ ಹೆಣೆದಿದ್ದ ಸಿದ್ದರಾಮಯ್ಯನವರಿಗೆ ಅದೇ ತಂತ್ರ ಈ ಬಾರಿ ಮುಳುವಾಗಲಿದೆ. ಚಾಮುಂಡೇಶ್ವರಿಯಲ್ಲಿ ಸೋಲಿನ ಭೀತಿಯಿಂದ ಬಾದಾಮಿಗೂ ಹಾರಿದ್ದಾರೆ. ಅಲ್ಲಿನ ಜನರಿಗೂ ಸಿದ್ದರಾಮಯ್ಯನವರ ಗೂಡಾರ್ಥ ಗೊತ್ತಿದೆ. ಅದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.
ಕೆಲ ದಿನಗಳ ಹಿಂದೆ ಜನಾರ್ಧನ ರೆಡ್ಡಿಯನ್ನು ಪ್ರಚಾರದಿಂದ ದೂರ ಇಡುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿತ್ತು. ಕಾಂಗ್ರೆಸ್ ಅವರನ್ನೇ ಗುರಿಯಾಗಿಟ್ಟುಕೊಂಡು ಪದೇ ಪದೇ ದಾಳಿ ನಡೆಸಿದ್ದರಿಂದ ತುಸು ವಿಚಲಿತರಾದ ಬಿಜೆಪಿ ನಾಯಕರು ಸಕ್ರಿಯವಾಗಿ ಪಾಲ್ಗೊಳ್ಳದಂತೆ ಅಂತರ ಕಾಯ್ದುಕೊಂಡಿದ್ದರು. ಅಮಿತ್ ಶಾ ಸೇರಿದಂತೆ ಖುದ್ದು ಹೈಕಮಾಂಡ್ ನಾಯಕರೇ ದೂರ ಉಳಿಯಬೇಕೆಂದು ಸೂಚಿಸಿದ್ದರಿಂದ ವಿಧಿಯಿಲ್ಲದೆ ಜನಾರ್ಧನ ರೆಡ್ಡಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದರು.
ಗೆಳೆಯ ಶ್ರೀರಾಮುಲು ಪರ ಅವರು ಪ್ರಚಾರ ನಡೆಸಲು ಮುಂದಾಗಿದ್ದು ವಿವಾದಕ್ಕೆ ಕಾರಣವಾಗಿತ್ತು. ಆದರೆ ಯಡಿಯೂರಪ್ಪ ಇಂದು ಜನಾರ್ಧನ ರೆಡ್ಡಿ ಪಕ್ಷದ ಪರ ಪ್ರಚಾರ ನಡೆಸಿದರೆ ಯಾವ ತಪ್ಪು ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಆ ಮೂಲಕ ಅಕ್ರಮ ಗಣಿಗಾರಿಕೆ ಆರೋಪದಡಿ ಪ್ರಚಾರದಿಂದಲೇ ದೂರ ಉಳಿದಿದ್ದ ಮಾಜಿ ಸಚಿವ ಜನಾರ್ಧನ ರೆಡ್ಡಿ ಮತ್ತೆ ಬಿಜೆಪಿ ಪರ ಪ್ರಚಾರ ನಡೆಸುವ ಸಾಧ್ಯತೆಗಳು ನಿಚ್ಚಳವಾಗಿದೆ. ಅಲ್ಲದೆ ಈ ಹಿಂದೆ ಪಕ್ಷದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ರೆಡ್ಡಿಯನ್ನು ಭೇಟಿಯಾಗಿದ್ದ ಬಿಎಸ್ ವೈ ಆತ್ಮೀಯವಾಗಿ ಮಾತನಾಡಿಸಿದ್ದ ವಿಡಿಯೋಗಳು ಕೂಡ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics