ಬೆಂಗಳೂರು: ಮುಂದಿನ 10-15ದಿನಗಳಲ್ಲಿ ತಾವು ಈ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲು ಬಿಜೆಪಿ ಅಭ್ಯರ್ಥಿಗಳ ಪರ ಮತ ಚಲಾಯಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಯಎಸ್.ಯಡಿಯೂರಪ್ಪ ವೀರಶೈವ ಲಿಂಗಾಯತ ಸಮುದಾಯವನ್ನು ಒತ್ತಾಯಿಸಿದ್ದಾರೆ.
ಶಿವಮೊಗ್ಗ ನಗರ, ಭದ್ರಾವತಿ ತಾಲ್ಲೂಕಿನ ಅನವೇರಿ, ಶಿವಮೊಗ್ಗ ತಾಲ್ಲೂಕಿನ ಹೊಳಲೂರು ಮತ್ತು ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯಲ್ಲಿ ನಿನ್ನೆ ಬಿಜೆಪಿ ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನಪರ ಮತ್ತು ರೈತಪರ ಸರ್ಕಾರಗಳಿಗೆ ಬಿಜೆಪಿ ಪರ ಮತ ಹಾಕುವಂತೆ ಮತದಾರರನ್ನು ಒತ್ತಾಯಿಸಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬೂಡಿಗೆರೆ ಏತ ನೀರಾವರಿ ಯೋಜನೆಯ ತಾಂತ್ರಿಕ ಸಮೀಕ್ಷೆ ನಡೆಸಲಾಗುವುದು ಎಂದು ಅನವೇರಿಯಲ್ಲಿ ಯಡಿಯೂರಪ್ಪ ಜನರಿಗೆ ಭರವಸೆ ನೀಡಿದರು. ಇದು 2008ರಲ್ಲಿ ಈ ಭಾಗದ ಜನರಿಗೆ ನೀರೊದಗಿಸಲು ಅನುಮೋದನೆಗೊಂಡ ನೀರಾವರಿ ಯೋಜನೆಯಾಗಿದೆ. ಕುಮ್ಸಿ ಮತ್ತು ಹಾರ್ನಹಳ್ಳಿ ಮತ್ತು ಬಹು ಗ್ರಾಮಗಳಲ್ಲಿ ಕುಡಿಯುವ ನೀರಿನ ಯೋನೆ ಇದಾಗಿದೆ.
ಈ ಭಾಗದ ರೈತರು ಮೆಕ್ಕೆಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸುವಂತೆ ಒತ್ತಾಯಿಸಿದ ಯಡಿಯೂರಪ್ಪ, ಬೆಳೆಗೆ ಪ್ರತಿ ಕ್ವಿಂಟಾಲ್ ಗೆ 1500 ರೂಪಾಯಿ ಕನಿಷ್ಠ ಬೆಂಬಲ ಬೆಲೆಯನ್ನು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನೀಡಲಿದೆ ಎಂದರು. ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಾಲ್ ಗೆ 1,250 ರೂಪಾಯಿ ಕನಿಷ್ಠ ಬೆಂಬಲ ಬೆಲೆ ಘೋಷಿಸಿದ್ದು ರಾಜ್ಯದ ಕಾಂಗ್ರೆಸ್ ಸರ್ಕಾರ ಇದನ್ನು ರೈತರಿಗೆ ಒದಗಿಸುವಲ್ಲಿ ವಿಫಲವಾಗಿದೆ ಎಂದರು.