ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ಕಳೆದುಕೊಳ್ಳುವ ಭಯದಿಂದ ಚಾಮರಾಜನಗರಕ್ಕೆ ಭೇಟಿ ಕೊಟ್ಟಿಲ್ಲ. ಆದರೂ ಮೋದಿ 2019ಕ್ಕೆ ಕುರ್ಚಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ವ್ಯಂಗ್ಯವಾಡಿದ್ದಾರೆ.
ಇಂದು ಚಾಮರಾಜನಗರದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿಎಂ, ಪ್ರಧಾನಿ ಮೋದಿ ಚಾಮರಾಜನಗರದ ಸಮೀಪ ಸಂತೇಮರಳ್ಳಿಗೆ ಬಂದಿದ್ದಾರೆ. ಆದರೆ ಚಾಮರಾಜನನಗರಕ್ಕೆ ಬಂದಿಲ್ಲ. ಆದರೂ ಅವರು ಮುಂದಿನ ವರ್ಷ ಅಧಿಕಾರ ಕಳೆದುಕೊಳ್ಳುವುದು ಖಚಿತ ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಅಲ್ಪ ಸಂಖ್ಯಾತರು ಆತಂಕದಿಂದ ಬದುಕುತ್ತಿದ್ದಾರೆ. ಬಿಜೆಪಿ ಕೋಮುವಾದಿ ಪಕ್ಷ ಎಂದು ಆರೋಪಿಸಿದರು.
ಮೋದಿ ಒಬ್ಬ ಮಹಾನ್ ಸುಳ್ಳುಗಾರ ಎಂದು ವಾಗ್ದಾಳಿ ನಡೆಸಿದ ಸಿಎಂ, ದೇಶ ಆಳಲು 56 ಇಂಚಿನ ಎದೆ ಅಲ್ಲ, ವಿಶಾಲವಾದ ಹೃದಯ ಬೇಕು. ಬಾಡಿ ಬಿಲ್ಡರ್ ಗೂ ಮೋದಿಯಂತೆ 56 ಇಂಚಿನ ಎದೆ ಇರುತ್ತದೆ ಎಂದು ಸಿಎಂ, ಪ್ರಧಾನಿಯನ್ನು ಛೇಡಿಸಿದರು.
ನಾನೂ ತಿನ್ನಲ್ಲ ತಿನ್ನುವುದಕ್ಕೂ ಬಿಡುವುದಿಲ್ಲ. ಚೌಕಿದಾರನಾಗಿ ಕೆಲಸ ಮಾಡುತ್ತೇನೆ ಎಂದು ಮೋದಿ ಹೇಳಿದ್ದರು. ವಿಜಯ್ ಮಲ್ಯ, ನೀರವ್ ಮೋದಿ ದೇಶ ಕೊಳ್ಳೆ ಹೊಡೆದು ಹೋಗುವಾಗ ಪ್ರಧಾನಿ ಮೋದಿ ಎಲ್ಲಿ ಹೋಗಿದ್ದರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ತೈಲ, ಅಡುಗೆ ಅನಿಲ ಬೆಲೆ ಎಷ್ಟಿತ್ತು, ಬಿಜೆಪಿ ಸರ್ಕಾರ ಬಂದ ಮೇಲೆ ಎಷ್ಟಾಗಿದೆ. ಇದೆ ಏನು ಅಚ್ಚೆ ದಿನ್. ಮನ್ ಕಿ ಬಾತ್ ಬದಲು ಕಾಮ್ ಕಿ ಬಾತ್ ಹೇಳಿ’ ಎಂದು ವಾಗ್ದಾಳಿ ನಡೆಸಿದರು.