ಬಬಲೇಶ್ವರ: ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಕೇಂದ್ರಸರ್ಕಾರ ಕರ್ನಾಟಕವನ್ನು ನಿರ್ಲಕ್ಷಿಸಿದ್ದು, ತಾರತಾಮ್ಯ ನೀತಿ ಅನುಸರಿಸುತ್ತಿದೆ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಆರೋಪಿಸಿದ್ದು, ಮೋದಿಯ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಘೋಷಣೆಯನ್ನು ಪ್ರಶ್ನಿಸಿದ್ದಾರೆ.
ವಿಜಯಪುರ ಜಿಲ್ಲೆ ಬಬಲೇಶ್ವರದಲ್ಲಿಂದು ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,ಕರ್ನಾಟಕ ಬರಗಾಲದಿಂದ ಬಳಲುತ್ತಿದ್ದು ರೈತರು ಸಂಕಷ್ಟಕ್ಕೀಡಾಗಿದ್ದರೂ ಮೋದಿ ಸ್ಪಂದಿಸಲಿಲ್ಲ ಇದು ರಾಜ್ಯದ ರೈತರಿಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಮಾಡಿದ್ದ ಅಪಮಾನ ಎಂದು ವಾಗ್ದಾಳಿ ನಡೆಸಿದರು.
ರೈತರ ಸಾಲ ಮನ್ನಾಕ್ಕಾಗಿ ಸಿದ್ದರಾಮಯ್ಯ ಹಲವು ಬಾರಿ ಪ್ರಧಾನಿ ಅವರ ಬಳಿ ನೆರವು ಕೋರಿದ್ದರೆ, ಪ್ರಧಾನಿ ಅದನ್ನು ತಿರಸ್ಕರಿಸುತ್ತಾರೆ. ಕೇಂದ್ರವನ್ನು ಅವಲಂಬಿಸಿದೆ ಸಿದ್ದರಾಮಯ್ಯ 22 ಲಕ್ಷ ರೈತರ ಸಾಲ ಮನ್ನಾ ಮಾಡಿದ್ದಾರೆ. ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟಿನ್ ಮತ್ತಿತರ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ತಿಳಿಸಿದರು.
ಯುಪಿಎ ಜಾರಿಗೊಳಿಸಿದ್ದ ನರೇಗಾ ಯೋಜನೆಯನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ವಿರೋಧಿಸಿದ್ದರು. ಮೋದಿ ಕಲಾವಿದರಂತೆ ಮಾತನಾಡುತ್ತಾರೆ. ಅವರ ಭಾಷಣದಿಂದ ದೇಶವನ್ನು ಹಸಿವಿನಿಂದ ಮುಕ್ತಗೊಳಿಸಿದ್ದರೆ ಸಂತೋಷಗೊಳ್ಳುತ್ತಿದ್ದೆ. ಆದರೆ, ಅವರ ಭಾಷಣದಿಂದ ಹೊಟ್ಟೆ ತುಂಬುವುದಿಲ್ಲ, ಹಸಿವು ನೀಗಿಸುವ ಆಹಾರದ ಅಗತ್ಯವಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕರ್ನಾಟಕವನ್ನು ದೇಶದಲ್ಲಿಯೇ ನಂಬರ್ 1 ರಾಜ್ಯವನ್ನಾಗಿ ಮಾಡಿದೆ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಹೇಳಿದ್ದಾರೆ.
ದೇಶದ ನೈಜ ಸಮಸ್ಯೆಗಳ ಬಗ್ಗೆ ಮೋದಿಗೆ ಕಾಳಜಿ ಇಲ್ಲ,ದಲಿತರು, ಮಹಿಳೆಯರು, ಮಕ್ಕಳಿಗಾಗಿ ಏನು ಮಾಡಿದ್ದಾರೆ ಭ್ರಷ್ಟಾಚಾರದಲ್ಲಿ ಮುಳುಗಿರುವ ನಿಮ್ಮ ಸಚಿವರ ಬಗ್ಗೆ ನಿಮ್ಮ ನಿಲುವು ಏನು ಎಂದು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ ಸೋನಿಯಾಗಾಂಧಿ, ರಾಜ್ಯದ ಅಭಿವೃದ್ದಿಗಾಗಿ ಕಾಂಗ್ರೆಸ್ ಬೆಂಬಲಿಸುವಂತೆ ಜನರಲ್ಲಿ ಮನವಿ ಮಾಡಿಕೊಂಡರು.