ಬೆಂಗಳೂರು: ಬ್ಯಾಟರಾನಪುರ ಬೆಂಗಳೂರು ಉತ್ತರದಲ್ಲಿ ಅತಿ ದೊಡ್ಡ ವಿಧಾನಸಭಾ ಕ್ಷೇತ್ರವಾಗಿದ್ದು, ಒಕ್ಕಲಿಗ ಮತ್ತು ಹಿಂದುಳಿದ ವರ್ಗದರೇ ಅಧಿಕ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಇದು ಏಳು ಬಿಬಿಎಂಪಿ ವಾರ್ಡ್ ಗಳನ್ನೊಳಗೊಂಡಿದ್ದು, ನಾಲ್ವರು ಕಾಂಗ್ರೆಸ್ ಕಾರ್ಪೋರೇಟರ್ ಗಳಿದ್ದರೆ, ಮೂವರು ಬಿಜೆಪಿಯನ್ನು ಪ್ರತಿನಿಧಿಸುತ್ತಿದ್ದಾರೆ. ಕೃಷಿ ಸಚಿವ ಕೃಷ್ಣ ಬೈರೇಗೌಡ ಮೂರನೇ ಬಾರಿಗೆ ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಬಿ ಪ್ಯಾಕ್ ಸರ್ವೇ ಪ್ರಕಾರ ಕ್ಷೇತ್ರದಲ್ಲಿ ಶೇ.80 ರಷ್ಟು ಅಭಿವೃದ್ದಿ ಕಾಮಗಾರಿಗಳು ಪೂರ್ಣಗೊಂಡಿದ್ದು, ಇದು ಕೃಷ್ಣ ಬೈರೇಗೌಡರಿಗೆ ವರವಾಗುವ ಸಾಧ್ಯತೆಯಿದೆ. ಆದಾಗ್ಯೂ, ಕೆಲ ಬಡಾವಣೆಗಳಲ್ಲಿ ರಸ್ತೆ , ಒಳಚರಂಡಿ ಸರಿಯಾಗಿಲ್ಲ ಕುಡಿಯುವ ನೀರಿನ ಸಮಸ್ಯೆಯೂ ಕಾಡುತ್ತಿದೆ. ಕ್ಷೇತ್ರದಲ್ಲಿನ ಜನರು ಕುಡಿಯುವ ನೀರಿಗಾಗಿ ಹೆಚ್ಚಾಗಿ ಬೋರ್ ವೆಲ್ ಹಾಗೂ ಟ್ಯಾಂಕರ್ ಗಳನ್ನು ಅವಲಂಬಿಸಿದ್ದಾರೆ.
ಈ ಕ್ಷೇತ್ರದಿಂದ ಸ್ಪರ್ಧಿಸಿರುವ ಮೂವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಾಗಾಗೀ ಪ್ರಬಲ ಪೈಪೋಟಿ ಉಂಟಾಗಿದ್ದು, ಮತ ವಿಭಜನೆಯಾಗುವ ಸಾಧ್ಯತೆ ಇದೆ.
ಬಿಜೆಪಿ ಅಭ್ಯರ್ಥಿ ರವಿ ಕೆಲ ವರ್ಷಗಳಿಂದ ನಾಪತ್ತೆಯಾಗಿದ್ದರು. ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಆದರೆ, ಜನರು ಅವರ ಮುಖವನ್ನೇ ನೋಡಿಲ್ಲ , ಜೆಡಿಎಸ್ ಅಭ್ಯರ್ಥಿ ಚಂದ್ರಣ್ಣ, ಮೊದಲ ಬಾರಿಗೆ ಅದೃಷ್ಟ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.
ಕೃಷ್ಣಬೈರೇಗೌಡ ಮಾಡಿರುವ ಕೆಲಸದ ಬಗ್ಗೆ ತೃಪ್ತಿಯಿದೆ. ಅವರು ಸುಲಭವಾಗಿ ಜನರ ಕೈಗೆ ಸಿಕ್ಕುತ್ತಾರೆ. ಅನೇಕ ನಾಗರಿಕ ಪರ ಚಟುವಟಿಕೆಗಳನ್ನು ತೊಡಗಿಸಿಕೊಂಡಿದ್ದು, ಹಲವು ಸಮಸ್ಯೆಗಳನ್ನು ಬಗೆಹರಿಸಿದ್ದಾರೆ ಎಂದು ಕಾಫಿ ಬೋರ್ಡ್ ಲೇಔಟ್ ನಿವಾಸಿಗಳ ಕಲ್ಯಾಣ ಅಸೋಸಿಯೇಷನ್ ಪ್ರತಿನಿಧಿ ಹರಿ ಕಣ್ಣಯ್ಯ ಹೇಳುತ್ತಾರೆ.