ಸಿಲಿಕಾನ್ ಸಿಟಿಯಲ್ಲಿ ಅಬ್ಬರ ಪ್ರಚಾರ; ಬೆಂಗಳೂರನ್ನು ಕೊಂಡಾಡಿದ ರಾಹುಲ್ ಗಾಂಧಿ
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಗುರುವಾರ ತೆರೆ ಬೀಳಲಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಬುಧವಾರ ದಿನವಿಡೀ ಸಿಲಿಕಾನ್ ಸಿಟಿಯಲ್ಲಿ ಭರ್ಜರಿ ರೋಡ್ ಶೋ, ಸಂವಾದ, ಕಾರ್ಯಕರ್ತರ ಸಭೆ ಹಾಗೂ ಸಾರ್ವಜನಿಕ ಸಭೆಗಳನ್ನು ನಡೆಸಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮಿಂಚಿನ ಪ್ರಚಾರ ನಡೆಸಿದರು.
ಪ್ರಚಾರದ ಅಂಗವಾಗಿಯೇ ಟೆಂಪಲ್ ನಡೆಸಿದ ರಾಹುಲ್ ಗಾಂಧಿ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನ, ನ್ಯೂ ತಿಪ್ಪಸಂದ್ರದ ವೀರಾಂಜನೇಯ ಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಜೊತೆಗೆ ಕಾಟನ್ ಪೇಟೆಯ ಮಸೀದಿಗೂ ಭೇಟಿ ನೀಡಿ, ಸಂಜೆ ಡಾ.ರಾಜ್ ಕುಮಾರ್ ಸಮಾಧಿಗೆ ತೆರಳಿ ನಮನ ಸಲ್ಲಿಸಿದರು. ಪ್ರಚಾರುದುದ್ದಕ್ಕೂ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ತೀವ್ರವಾಗಿ ಕಿಡಿಕಾರಿದರು.
ಪ್ರಚಾರದ ವೇಳೆ ರಸ್ತೆಯುದ್ದಕ್ಕೂ ಜಯಘೋಷಣೆಗಳೊಂದಿಗೆ ಸ್ವಾಗ ಕೋರಿದ ಕಾರ್ಯಕರ್ತರು, ನ್ಯೂ ತಿಪ್ಪಸಂದ್ರದ ಬಳಿ ವೀರಾಂಜನೇಯ ದೇವಸ್ಥಾನದಿಂದ ಬಿಇಎಂಎಲ್ ವೃತ್ತದವರೆಗೆ ಪುಷ್ಪಾರ್ಚನೆ ಮಾಡಿದರು. ಬೆಳಿಗ್ಗೆಯಿಂದ ಸಂಜೆವರೆಗೂ ರಾಹುಲ್ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಲಾಲ್ ಬಾಗ್ ನಲ್ಲಿರುವ ಎಂಟಿಆರ್ ರೆಸ್ಟೊರೆಂಟ್ ಭೇಟಿ ನೀಡಿ ಮಧ್ಯಾಹ್ನದ ಭೋಜನ ಮಾಡಿದರು. ನಂತರ ನ್ಯೂ ತಿಪ್ಪಸಂದ್ರದಲ್ಲಿರುವ ವೀರಾಂಜನೇಯ ದೇಗುಲಕ್ಕೆ ಭೇಟಿ ನೀಡಿದರು.
ಬೆಳಿಗ್ಗೆ 11.15ಕ್ಕೆ ಬಸವನಗುಡಿಯ ದೊಡ್ಡ ಗಣಪತಿ ದೇವಸಥಾನಕ್ಕೆ ಆಗಮಿಸಿದ ಅವರನ್ನು ಮಂಗಳವಾದ್ಯ ಹಾಗೂ ಪೂರ್ಣಕುಂಭದೊಂದಿಗೆ ಸ್ವಾಗತಿಸಿಲಾಯಿತು. ದೇವಸ್ತಾನ ಪ್ರದಕ್ಷಿಣ ಹಾಕುವ ವೇಳೆ ಅರ್ಚಕರಿಂದ ದೇವಸ್ತಾನದ ಇತಿಹಾಸ ತಿಳಿದುಕೊಂಡು 20 ನಿಮಿಷಗಳ ಕಾಲ ಅಲ್ಲಿಯೇ ಇದ್ದು ಹೊರಬಂದರು. ಆಶ್ರಮ ವೃತ್ತದಿಂದ ದೇವಸ್ಥಾನದವರೆಗೂ ಕಾರ್ಯಕರ್ತರು ರಸ್ತೆಯ ಎರಡೂ ಬದಿಯಲ್ಲಿಯೂ ನಿಂತು ರಾಹುಲ್ ಪರ ಘೋಷಣೆಗಳನ್ನು ಕೂಗಿದರು.
ಹೊಸೂರು ರಸ್ತೆಯ ಗಾರ್ಮೆಂಟ್ಸ್ ಫ್ಯಾಕ್ಟರಿ ಮಹಿಳಾ ನೌಕರರೊಂದಿಗೆ ಸಂವಾದ ನಡೆಸಿದ ಅವರು, ಕೇಂದ್ರ ಸರ್ಕಾರದ ಅಪನಗದೀಕರಣಮತ್ತು ಜಿಎಸ್'ಟಿ ಜಾರಿಯಿಂದಾಗಿ ಗಾರ್ಮೆಂಟ್ಸ್ ನಂತರ ಸಾಕಷ್ಟು ಸಣ್ಣ ಉದ್ಯಮಗಳು ಮುಚ್ಚಿಹೋಗಿವೆ. ಇದರಿಂದಾಗಿ ದೇಶದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದೆ ಎಂದು ದೂರಿದರು.
ಸರ್ಕಾರಿ ಸೌಲಭ್ಯಗಳನ್ನು ನೇರವಾಗಿ ದೇಶದ ಬಡ ಜನರಿಗೆ ತಲುಪಿಸಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತಂದ ಆಧಾರ್ ಯೋಜನೆಯನ್ನು ಪ್ರಧಾನಿ ಮೋದಿ ನೇತೃತ್ವದ ಎನ್'ಡಿಎ ಸರ್ಕಾರ ಜನರನ್ನು ನಿಯಂತ್ರಿಸುವ ಮೂಲಕ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪ ಮಾಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos