ಕಟ್ಟಾ ಸುಬ್ರಮಣ್ಯನಾಯ್ಡು ಮತ್ತು ರೋಷನ್ ಬೇಗ್
ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಟಿತ ಕ್ಷೇತ್ರಗಳ ಪೈಕಿ ಒಂದಾದ ಶಿವಾಜಿನಗರದಲ್ಲಿ ಬಿಜೆಪಿ ಮುಖಂಡ ಕಟ್ಟಾ ಸುಬ್ರಮಣ್ಯನಾಯ್ಡು ರೀ ಎಂಟ್ರಿ ಸಚಿವ ರೋಷನ್ ಬೇಗ್ ಅವರನ್ನು ಆಂತಕಕ್ಕೀಡುಮಾಡಿದೆ.
ಅಲ್ಪಸಂಖ್ಯಾತ ಸಮುದಾಯ ಹಾಗೂ ತಮಿಳು ಮಾತನಾಡುವ ಜನ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ರೋಷನ್ ಬೇಗ್ ಮತ್ತೆ ಅಧಿಕಾರ ಪಡೆಯುವ ಹುಮ್ಮಸ್ಸಿನಲ್ಲಿದ್ದಾರೆ, ಆರ್ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣ ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಒಗ್ಗೂಡಿದ ಹಿಂದೂಗಳ ಮತ ನಾಯ್ಡು ಪರವಾಗುವ ಸಾಧ್ಯತೆಗಳಿವೆ.
ರಾಮಸ್ವಾಮಿ ಪಾಳ್ಯ, ಜಯಮಹಲ್, ಸಂಪಂಗಿ ರಾಮನಗರ, ಹಲಸೂರು, ಭಾರತೀ ನಗರ, ಶಿವಾಜಿನಗರ ಮತ್ತು ವಸಂತನಗರ ಬಿಬಿಎಂಪಿ ವಾರ್ಡ್ ಗಳು ಈ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತವೆ,
ಚಿಕ್ಕಪೇಟೆ ಅಥವಾ ಗಾಂಧಿನಗರ ಕ್ಷೇತ್ರಗಳಂತೆ ಈ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ಜೊತೆಗೆ ಜೀವನ ಮಟ್ಟ ಕೂಡ ಇಲ್ಲಿ ಉತ್ತಮವಾಗಿಲ್ಲ, ಅಲ್ಪ ಸಂಖ್ಯಾತ ಸಮುದಾಯದ ಪ್ರಾಬಲ್ಯ ಇರುವ ಶಿವಾಜಿನಗರದಲ್ಲಿ, ಅದೇ ಹಳೇಯ ಸಮಸ್ಯೆಗಳಾದ, ಕಸ ಹಾಗೂ ಬೀದಿ ನಾಯಿಗಳ ಹಾವಳಿ, ಕಿರಿದಾದ ರಸ್ತೆ , ಫುಟ್ ಪಾತ್ ಒತ್ತುವರಿ ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ದೊರೆತಿಲ್ಲ,
ಜೆಡಿಎಸ್ ಅಭ್ಯರ್ಥಿ ಶೇಕ್ ಮಸ್ತಾನ್ ಅಲಿ ಝೀರೋ ಬ್ಯಾಲೆನ್ಸ್ ಘೋಷಿಸಿಕೊಂಡಿದ್ದಾರೆ. ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗಳ ಮೇಲ್ದರ್ಜೆಗೇರಿಸಿದ್ದನ್ನು ಹೊರತು ಪಡಿಸಿದರೇ ಈ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತ ಮಹತ್ವದ ಕೆಲಸಗಳು ನಡೆದಿಲ್ಲ.
ರಾಜ್ಯ ಸರ್ಕಾರದ ಹಲವು ಭಾಗ್ಯಗಳು ಮತ್ತು ಇಂದಿರಾ ಕ್ಯಾಂಟಿನ್, ಮತದಾರರ ಮೇಲೆ ಪರಿಣಾಮ ಬೀರುವುದೇ ಎಂಬುದನ್ನು ಕಾದು ನೋಡಬೇಕು, ರೋಷನ್ ಬೇಗ್ ಮತ್ತು ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧದ ಕ್ರಿಮಿನಲ್ ಕೇಸ್ ಗಳು ಬಾಕಿ ಉಳಿದುಕೊಂಡಿವೆ, ಆದರೆ ಅವುಗಳ ಬಗ್ಗೆ ನಾಯಕರು ತಲೆ ಕೆಡಿಸಿಕೊಂಡಿಲ್ಲ ಎಂಬುದು ಇಲ್ಲಿನ ಜನಗಳ ಅಭಿಪ್ರಾಯ.