ರಾಜಕೀಯ

ಎಸ್'ಡಿಪಿಐ, ಪಿಎಫ್ಐ ಬಗ್ಗೆ ಸಿದ್ದರಾಮಯ್ಯ ಮೃದು ಧೋರಣೆ: ಮಧ್ಯಪ್ರದೇಶ ಸಿಎಂ ಚೌಹಾಣ್

Manjula VN
ಮೈಸೂರು; ದೇಶಕ್ಕೆ ಬೆದರಿಕೆಯಾಗಿ ಪರಿಣಮಿಸಿರುವ ಎಸ್'ಡಿಪಿಐ ಹಾಗೂ ಪಿಎಫ್ಐ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃದು ಧೋರಣೆ ಹೊಂದಿದ್ದಾರೆಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಗುರುವಾರ ಹೇಳಿದ್ದಾರೆ. 
ಚಿಕ್ಕಪೇಟೆ ಅಭ್ಯರ್ಥಿ ಉದಯ್ ಗರುಡಾಚಾರ್ ಪರವಾಗಿ ನಗರದ ಪುರಭವನದಿಂದ ಎಸ್.ಪಿ ರಸ್ತೆಮೂಲಕ ಧರ್ಮರಾಯ ದೇವಸ್ಥಾನ ಬಡಾವಣೆಗಳಲ್ಲಿ ಮತಯಾಚನೆ ಮಾಡಿದ ಶಿವರಾಜ್ ಸಿಂಗ್ ಚೌಹಾಣ್ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. 
ರಾಜ್ಯದಲ್ಲಿ 24 ಬಿಜೆಪಿ ಹಾಗೂ ಆರ್'ಎಸ್ಎಸ್ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಹಂತಕರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಮುಖ್ಯಮಂತ್ರಿಗಳು ವಿಫಲರಾಗಿದ್ದಾರೆಂದು ಹೇಳಿದ್ದಾರೆ. 
ಇದೇ ವೇಳೆ ರಾಜ್ಯದ ಅಭಿವೃದ್ಧಿಯತ್ತ ಗಮನಹರಿಸುವುದನ್ನು ಬಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ವೀರಶೈವ ಮತ್ತು ಲಿಂಗಾಯತ ಸಮುದಾಯಗಳನ್ನು ವಿಭಜಿಸಲು ಹೊರಟಿದ್ದಾರೆ. ಜನರ ಪರ ಬಿ.ಎಸ್.ಯಡಿಯೂರಪ್ಪ ಅವರಿದ್ದು, ರಾಜ್ಯದಲ್ಲಿ ಪ್ರಬಲ ನಾಯಕತ್ವ ಹಾಗೂ ಸಿದ್ದಾಂತಗಳು ಅಧಿಕಾರಕ್ಕೆ ಬರಲು ಬಿಜೆಪಿಗೆ ಮತ್ತೊಂದು ಅವಕಾಶ ನೀಡಿ ಎಂದು ಕೇಳಿದ್ದಾರೆ. 
ಕೇಂದ್ರದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರ ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸುತ್ತಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿಶ್ವದ ಅತಿದೊಡ್ಡ ಪಕ್ಷದ ನಾಯಕರಾಗಿದ್ದು, ಸಿದ್ದರಾಮಯ್ಯ ಸರ್ಕಾರವನ್ನು ಕೆಳಗಿಳಿಸಲು ಒಗ್ಗಟ್ಟನ್ನು ಪ್ರದರ್ಶಿಸುತ್ತಿದ್ದಾರೆ. 
ಮಧ್ಯಪ್ರದೇಶದಲ್ಲಿ ಮುಂಬರುವ ಚುನಾವಣೆ ಮೇಲೆ ಕರ್ನಾಟಕ ಚುನಾವಣೆ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಅಭಿವೃದ್ಧಿ ವಿಚಾರಮೇಲೆ ನಾವು ಚುನಾವಣೆಯಲ್ಲಿ ಹೋರಾಡುತ್ತೇವೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ನಾವು ಬಳಕೆ ಮಾಡಿಕೊಳ್ಳುತ್ತೇವೆಂದಿದ್ದಾರೆ. 
SCROLL FOR NEXT