ರಾಜಕೀಯ

ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ, ಕಾರ್ಯಕರ್ತರ ಶ್ರಮ ಫಲಿಸುತ್ತದೆ: ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ

Srinivasamurthy VN
ಬೆಂಗಳೂರು: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಶ್ರಮ ಫಲಿಸಲಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚನೆ ಮಾಡಲಿದೆ ಎಂದು ಕೆಪಿಸಿಸಿ ಅದ್ಯಕ್ಷ ಜಿ ಪರಮೇಶ್ವರ್ ಹೇಳಿದ್ದಾರೆ.
ಮತದಾನ ಮುಕ್ತಾಯವಾದ ಬಳಿಕ ಇಂದು ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪರಮೇಶ್ವರ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ. ನಾವು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ಕಾಂಗ್ರೆಸ್ ಕಾರ್ಯಕರ್ತರು ಕಳೆದ ಎರಡು ತಿಂಗಳಿಂದ ಬಾರಿ ಶ್ರಮ ಹಾಕಿ ಪಕ್ಷಕ್ಕಾಗಿ ಪ್ರಚಾರ ನಡೆಸಿದ್ದಾರೆ. ನಮಗಿಂತಲೂ ಮಿಗಿಲಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಭರ್ಜರಿ ಪ್ರಚಾರ ನಡೆಸಿದ್ದಾರೆ. ರಾಷ್ಟ್ರೀಯ ನಾಯಕರು ಆಗಮಿಸುತ್ತಿದ್ದ ಪ್ರತೀ ಕಾರ್ಯಕ್ರಮಕ್ಕೆ ಸಮರೋಪಾದಿಯಲ್ಲಿ ಸಿದ್ಧತೆ ನಡೆಸಿ ಪಕ್ಷಕ್ಕೆ ಉತ್ತಮ ಪ್ರಚಾರ ನಡೆಸಿದ್ದಾರೆ. ಇನ್ನು ಹಾಲಿ ಚುನಾವಣೆಯಲ್ಲಿ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಒಟ್ಟು 18 ಮೆಗಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದು, 34 ಕಾರ್ನರ್ ಮೀಟಿಂಗ್ ನಡೆಸಿದ್ದಾರೆ. ಅಂತೆಯೇ 43 ರೋಡ್ ಶೋ, 30 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದಾರೆ. ನಮ್ಮ ಬೂತ್ ಎಜೆಂಟ್​ಗಳ ಮಾಹಿತಿ ಪಡೆದು ಹೇಳುತ್ತಿದ್ದೇನೆ ಕಾಂಗ್ರೆಸ್​ ಕನಿಷ್ಟ 113 ಕ್ಷೇತ್ರಗಳಿಗೂ ಅಧಿಕ ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಹೇಳಿದರು. 
ಅಂತೆಯೇ ಕಾಂಗ್ರೆಸ್ ಬಹುಮತ ಪಡೆಯುವುದರಿಂದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಿಎಂ ಆಗೋ ಸಾಧ್ಯತೆ ಉದ್ಭವಿಸುವುದಿಲ್ಲ. ಪ್ರತಿಯೊಂದು ಚುನಾವಣಾ ಭಾಷಣದಲ್ಲೂ ಪ್ರಧಾನಿ ಮೋದಿ ಅವರು, ರಾಹುಲ್‌ ಮತ್ತು ಸಿದ್ದರಾಮಯ್ಯ ಅವರನ್ನು ವೈಯುಕ್ತಿಕವಾಗಿ ಟೀಕಿಸಿದರು. ದೇಶದ ಅತ್ಯುನ್ನತ ಸ್ಥಾನದಲ್ಲಿರುವವರಿಗೆ ಇಂತಹ ಹೇಳಿಕೆ ಶೋಭೆ ತರುವುದಿಲ್ಲ ಎಂದು ಪರಮೇಶ್ವರ್ ಹೇಳಿದರು, ಅಂತೆಯೇ ಚುನಾವಣಾ ಪ್ರಕ್ರಿಯೆ ಮುಗಿಯಲು ಇನ್ನೊಂದು ಹೆಜ್ಜೆ ಬಾಕಿ ಇದೆ. ರಾಜ್ಯದ ಮತದಾರರಿಗೆ ಧನ್ಯವಾದ ಎಂದು ಪರಮೇಶ್ವರ್ ಹೇಳಿದರು.
SCROLL FOR NEXT