ಬೆಂಗಳೂರು; ನಮ್ಮ ಶಾಸಕರನ್ನು ಸಂಪರ್ಕಿಸಲು ಬಿಜೆಪಿ ಸತತ ಯತ್ನಗಳನ್ನು ನಡೆಸುತ್ತಿದೆ. ಈ ವಿಚಾರ ನಮಗೆ ಗೊತ್ತಿದೆ ಎಂದು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ಕೆಪಿಸಿಸಿ ಕಚೇರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಬಿಜೆಪಿಯವರು ನಮ್ಮ ಶಾಸಕರನ್ನು ಸೆಳೆಯಲು, ಸಂಪರ್ಕಿಸಲು ಸಾಕಷ್ಟು ಯತ್ನಗಳನ್ನು ನಡೆಸುತ್ತಿದ್ದಾರೆ. ಈ ವಿಚಾರ ನಮಗೂ ಗೊತ್ತಿದೆ. ಪ್ರತೀನಿತ್ಯ ಸಾಕಷ್ಟು ಒತ್ತಡಗಳು ಬರುತ್ತಿವೆ. ಆದರೆ. ಅಷ್ಟು ಸುಲಭವಲ್ಲ. ಈಗಾಗಲೇ ಎರಡೂ ಪಕ್ಷಗಳೂ ಒಂದಾಗಿದ್ದು, ಅಗತ್ಯ ಸಂಖ್ಯಾಬಲವನ್ನು ಹೊಂದಿದೆ ಇದನ್ನು ಜನರೂ ನೋಡುತ್ತಿದ್ದಾರೆಂದು ಹೇಳಿದ್ದಾರೆ.
ಇದೇ ವೇಳೆ ಶಾಸಕರನ್ನು ರಕ್ಷಣೆ ಮಾಡಲು ಸ್ಥಳಾಂತರ ಮಾಡುವಿರೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಶಾಸಕರನ್ನು ಸೆಳೆಯಲು, ಸರ್ಕಾರ ರಚನೆ ಮಾಡಲು ಬಿಜೆಪಿ ಖಂಡಿತವಾಗಿಯೂ ತಂತ್ರವನ್ನು ಹೂಡಿಯೇ ಇರುತ್ತದೆ. ನಮ್ಮ ಶಾಸಕರನ್ನು ನಾವು ರಕ್ಷಿಸಿಕೊಳ್ಳಬೇಕಿದೆ. ಅವರ ತಂತ್ರವೇನು ಎಂಬುದನ್ನು ಶೀಘ್ರದಲ್ಲಿಯೇ ಕಂಡು ಹಿಡಿಯುತ್ತೇವೆಂದು ತಿಳಿಸಿದ್ದಾರೆ.