ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಜಭವನವನ್ನು ದುರುಪಯೋಗ ಮಾಡಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್. ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಅಸಂವಿಧಾನಿಕ ನಿರ್ಧಾರ ಕೈಗೊಂಡಿದ್ದಾರೆ. ಬಹುಮತ ಸಾಬೀತು ಪಡಿಸಲು ಬಿಜೆಪಿ 15 ದಿನಗಳ ಕಾಲಾವಕಾಶ ನೀಡಿರುವುದು ಸಂವಿಧಾನಬಾಹಿರ ಎಂದರು.
ಸ್ವಚ್ಛ ಭಾರತ ಮಾಡುವುದಾಗಿ ಹೇಳುತ್ತಿರುವ ನರೇಂದ್ರಮೋದಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ವಿರುದ್ಧ ಬೆದರಿಕೆಯ ತಂತ್ರ ಹೂಡುತ್ತಿದೆ. ಇಡಿ ಮೂಲಕ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರನ್ನು ಹೆದರಿಸಿ ಬಿಜೆಪಿಗೆ ಬೆಂಬಲ ನೀಡುವಂತೆ ಒತ್ತಾಯಿಸಲಾಗಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ದಮನಕಾರಿ ನೀತಿಯನ್ನು ಖಂಡಿಸಲು ರಾಷ್ಟ್ರದ ಎಲ್ಲಾ ವಿರೋಧಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರು ಕೈಜೋಡಿಸುವಂತೆ ಕುಮಾರಸ್ವಾಮಿ ಮನವಿ ಮಾಡಿಕೊಂಡರು. ಎಲ್ಲಾ ರಾಷ್ಟ್ರಮಟ್ಟದ ನಾಯಕರು ದೇಶದ ಹಿತದೃಷ್ಟಿಯಿಂದ ಒಗ್ಗೂಡಿ ಹೋರಾಟ ನಡೆಸುವ ಮೂಲಕ ದೇಶದ ವ್ಯವಸ್ಥೆಯನ್ನು ರಕ್ಷಿಸಬೇಕೆಂದು ಕುಮಾರಸ್ವಾಮಿ ಒತ್ತಾಯಿಸಿದರು.