ಬೆಂಗಳೂರು; ಮಾಡು ಇಲ್ಲವೇ ಮಡಿ ಆಗಿದ್ದ ಚುನಾವಣೆಯಲ್ಲಿ ಗೋವಿಂದರಾಜ ನಗರ ಮತದಾರ ಕೊನೆಗೂ ಬಿಜೆಪಿಯ ವಿ.ಸೋಮಣ್ಣ ಅವರ ಕೈ ಹಿಡಿದಿದ್ದಾರೆ.
2009ರಲ್ಲಿ ಕಾಂಗ್ರೆಸ್ ಪಕ್ಷದ ಪ್ರಿಯಾಕೃಷ್ಣ ವಿರುದ್ಧ ಸೋಲು ಕಂಡಿದ್ದ ಸೋಮಣ್ಣ ಅವರು ಈ ಬಾರಿಯ ಚುನಾವಣೆಯಲ್ಲಿ 11,375 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ. ಈ ಮೂಲಕ ಪ್ರಿಯಕೃಷ್ಣ ವಿರುದ್ಧ ಇದ್ದ 10 ವರ್ಷಗಳ ರಾಜಕೀಯ ಸೇಡನ್ನು ಸೋಮಣ್ಣ ಅವರು ತೀರಿಸಿಕೊಂಡಿದ್ದಾರೆ.
ಪ್ರಚಾರದ ದಿನದಿಂದಲೂ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇತ್ತು. ಆದರೆ, ಕ್ಷೇತ್ರದ ಆರು ವಾರ್ಡ್ ಗಳಲ್ಲಿ ಬಿಜೆಪಿ ಇರುವುದು, ಕಳೆದ ಎರಡು ಬಾರಿ ಸೋತಿದ್ದ ಅನುಕಂಪ ಹಾಗೂ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಒಕ್ಕಲಿಗ ಮತ್ತು ಕುರುಬ ಮತಗಳು ಸೋಮಣ್ಣ ಅವರ ಗೆಲುವಿಗೆ ಸಹಕಾರಿಯಾಗಿತ್ತು.
ಸೋಮಣ್ಣ ಅವರು 79,135 ಮತ ಪಡೆದರೆ, ಪ್ರಿಯಾಕೃಷ್ಣ ಅವರು 67,760 ಮತ ಹಾಗೂ ಜೆಡಿಎಸ್ ಅಭ್ಯರ್ಥಿ ಕೇವಲ 7090 ಮತ ಪಡೆದೂ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.