ವಿಶ್ವಾಸ ಮತಯಾಚನೆಗೆ ಕ್ಷಣಗಣನೆ ಆರಂಭ; ಕಲಾಪಕ್ಕೆ ಇಬ್ಬರು ಶಾಸಕರು ಗೈರು
ಬೆಂಗಳೂರು; ಭಾರೀ ಹೈಡ್ರಾಮಗಳಿಗೆ ಸಾಕ್ಷಿಯಾಗಿರುವ ಕರ್ನಾಟಕದಲ್ಲಿನ ಹೊಸ ಸರ್ಕಾರ ರಚನೆಯ ಕಸರತ್ತು ಇದೀಗ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಅಂದುಕೊಂಡಂತೆಯೇ ವಿಧಾನಮಂಡಲ ಅಧಿವೇಶನಕ್ಕೆ ವಿಜಯನಗರ (ಹೊಸಪೇಟೆ) ಶಾಸಕ ಆನಂದ್ ಸಿಂಗ್ ಅವರು ಗೈರು ಹಾಜರಾಗಿದ್ದಾರೆ.
ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಆನಂದ್ ಸಿಂಗ್ ಅವರು ವಿಶ್ವಾಸಮತ ಯಾಚನೆಯಲ್ಲಿ ಬಿಜೆಪಿಗೆ ಬೆಂಬಲ ನೀಡುತ್ತಾರೆಂಬ ವದಂತಿಗಳು ಹಬ್ಬಿವೆ. ಕಾಂಗ್ರೆಸ್ ಶಾಸಕರಾದ ಪ್ರತಾಪ್ ಗೌಡ ಪಾಟೀಲ್, ಆನಂದ್ ಸಿಂಗ್ ಗೈರಾಗಿದ್ದು, ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಅವರ ವಶದಲ್ಲಿದ್ದಾರೆ ಎನ್ನಲಾಗಿದೆ. ಅಂತೆಯೇ ಇಬ್ಬರೂ ಶಾಸಕರು ಬೆಂಗಳೂರಿನ ಗೋಲ್ಡ್ ಪಿಂಚ್ ಹೊಟೆಲ್ ನಲ್ಲಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು, ಇದೀಗ ಹೊಟೆಲ್ ಗೆ ಕಾಂಗ್ರೆಸ್ ಮುಖಂಡರಾದ ಎಚ್ ಎಂ ರೇವಣ್ಣ ಮತ್ತು ಸಂಸದ ಡಿಕೆ ಸುರೇಶ್ ದೌಡಾಯಿಸಿದ್ದಾರೆ. ಅಲ್ಲದೆ ಅದೇ ಹೊಟೆಲ್ ಗೆ ಶಾಸಕರಿಗೆ ಭದ್ರತೆ ಕಲ್ಪಿಸುವ ಸಂಬಂಧ ರಾಜ್ಯ ಪೊಲೀಸ್ ವರಿಷ್ಠಾಧಿಕಾರಿಗಳಾದ ನೀಲಮಣಿ ರಾಜು, ಬೆಂಗಳೂರು ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಅವರು ಕೂಡ ದೌಡಾಯಿಸಿದ್ದಾರೆ.
ಆನಂದ್ ಸಿಂಗ್ ಜೊತೆಗೆ ಕಾಂಗ್ರೆಸ್'ನ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಕೂಡ ಸದನಕ್ಕೆ ಗೈರು ಹಾಜರಪಾಗಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟಕ್ಕೆ ಎರಡು ಸಂಖ್ಯೆ ಕಡಿಮೆಯಾಗುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. 117 ಸಂಖ್ಯಾಬಲವಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟ ಇಬ್ಬರ ಗೈರು ಹಾಜರಿನಿಂದಾಗಿ 115ಕ್ಕೆ ಇಳಿಯಲಿದೆ. ಇದರಂತೆ ಬಹುಮತ ಸಾಬೀತಿಗೆ 110 ಮ್ಯಾಜಿಕ್ ನಂಬರ್ ಆಗಲಿದೆ.