ಬೆಂಗಳೂರು: ಯಾವುದೇ ಕಾರಣಕ್ಕೂ 20-20 ಅಥವಾ 30-30 ಸರ್ಕಾರದ ಪ್ರಶ್ನೆಯೇ ಇಲ್ಲ, 5 ವರ್ಷಗಳ ಕಾಲ ಕುಮಾರಸ್ವಾಮಿ ಅವರೇ ಸಿಎಂ ಆಗಿರುತ್ತಾರೆ ಎಂದು ಜೆಡಿಎಸ್ ಹೇಳಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನವಾಡಿದ ಜೆಡಿಎಸ್ ಶಾಸಕ ಸಿಎಸ್ ಪುಟ್ಟರಾಜು ಅವರು, ಕುಮಾರಸ್ವಾಮಿ ಐದು ವರ್ಷ ಕಾಲ ಸಿಎಂ ಆಗಿರುತ್ತಾರೆ. 30-30 ತಿಂಗಳು ಅಧಿಕಾರ ಹಂಚಿಕೆ ಇಲ್ಲ. ಬೇಷರತ್ ಆಗಿ ಕಾಂಗ್ರೆಸ್ ನಮಗೆ ಬೆಂಬಲ ನೀಡಿದೆ ಎಂದು ಹೇಳಿದರು.
ಜೆಡಿಎಸ್ ಶಾಸಕರು ತಂಗಿರುವ ಲಿ ಮೆರಿಡಿಯನ್ ಹೋಟೆಲ್ನಲ್ಲಿ ಮಾತನಾಡಿದ ಅವರು, ಸರ್ಕಾರ ರಚನೆ ಕುರಿತು ಯಾವುದೇ ಊಹಾಪೋಹಗಳಿಗೂ ಆಸ್ಪದವಿಲ್ಲ. ಸಚಿವ ಸ್ಥಾನ ಹಂಚಿಕೆ ಬಗ್ಗೆ ಈಗಾಗಲೇ ಮಾತುಕತೆಯಾಗಿದೆ ಎಂದು ಹೇಳಿದರು. ಅಂತೆಯೇ ತಮಗೆ ಮಂತ್ರಿ ಸ್ಥಾನ ದೊರೆಯುವ ಕುರಿತು ವಿಶ್ವಾಸ ವ್ಯಕ್ತಪಡಿಸಿದ ಪುಟ್ಟರಾಜು ಅವರು, ತಮಗೆ ಪಕ್ಷ ಯಾವುದೇ ಸ್ಥಾನ ನೀಡಿದರೂ ನಿಭಾಯಿಸುತ್ತೇನೆ. ಮಂಡ್ಯ ಉಸ್ತುವಾರಿ ನೀಡುವ ಕುರಿತು ಚರ್ಚೆಯಾಗಿದೆ. ಈ ಸಂಬಂಧ ವರಿಷ್ಠರೂ ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಪುಟ್ಟರಾಜು ಹೇಳಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಶೋಭಾ ಕರಂದ್ಲಾಜೆ ಭಾಷೆ ಬಳಕೆ ಕಲಿಯಲಿ
ಜೆಡಿಎಸ್-ಕಾಂಗ್ರೆಸ್ನವರು ನಾಯಿ ನರಿಗಳ ರೀತಿ ಕಚ್ಚಾಡಿದ್ದರು ಎಂದು ಸಂಸದೆ ಶೋಭಾ ಕರಂದ್ಲಾಜೆ ನೀಡಿದ್ದ ಹೇಳಿಕೆಗೆ ಜೆಡಿಎಸ್ ಮುಖಂಡ ಕೋನರೆಡ್ಡಿ ತಿರುಗೇಟು ನೀಡಿದ್ದು, ಅವರು ಸಂಸದೆಯಾಗಿ ಈ ರೀತಿ ಭಾಷೆ ಬಳಸುವುದು ಸಲ್ಲದು. ಹಿಂದೆ ಬಿಜೆಪಿ, ಕೆಜೆಪಿ ಅಂತ ಎರಡು ಪಾರ್ಟಿ ಆಗಿದ್ದಾಗ ಅವರು ಮಾಡಿದ್ದೇನು? ನನ್ನ ಸೋಲಿಗೆ ಬಿಜೆಪಿಯವರೇ ಕಾರಣ ಅಂತ ಇದೇ ಶೋಭಾ ಹೇಳಿದ್ದರು. ಮೊದಲು ಶೋಭಾ ಕರಂದ್ಲಾಜೆ ಭಾಷೆ ಬಳಕೆಯನ್ನು ಕಲಿಯಲಿ ಎಂದು ಪುಟ್ಟರಾಜು ಹೇಳಿದ್ದಾರೆ.