ಬೆಂಗಳೂರು; ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಂತಹವರ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ ಎಂದು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ರಾಜ್ಯ ರಾಜಕೀಯದಲ್ಲಾದ ಬೆಳವಣಿಗೆಗಳ ಕುರಿತಂತೆ 'ನ್ಯೂ ಇಂಡಿಯನ್ ಎಕ್ಸ್'ಪ್ರೆಸ್' ನಡೆಸಿದ ಸಂದರ್ಶದಲ್ಲಿ ಮಾತನಾಡಿರುವ ಡಿ.ಕೆ.ಶಿವಕುಮಾರ್ ಅವರು, ಯಡಿಯೂರಪ್ಪ ರಾಜಿನಾಮೆ ನಿರೀಕ್ಷಿತವೇ ಆಗಿತ್ತು. ಯಡಿಯೂರಪ್ಪ ಅವರಿಗೆ ಬಹುಮತ ಇರಲಿಲ್ಲ ಎಂಬುದು ನಮಗೆ ಗೊತ್ತಿತ್ತು. ಅವರು ರಾಜಿನಾಮೆ ನೀಡುವುದು ಖಚಿತ ಎಂಬುದೂ ನಮಗೆ ತಿಳಿದಿತ್ತು ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಕುರಿತ ಪ್ರಶ್ನೆಗೆ ಉತ್ತರಿಸಿರುವ ಅವರು, ಅಮಿತ್ ಶಾ ಹಾಗೂ ಮೋದಿರಂತಹವರ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ ಎಂದು ತಿಳಿಸಿದ್ದಾರೆ.
ಬಹುಮತ ಸಾಬೀತಿಗೆ ಬೇಕಿದ್ದ ಶಾಸಕರನ್ನು ಹೊಂದಿಸಿಕೊಳ್ಳಲು ಕಾಂಗ್ರೆಸ್'ನ ಬುಟ್ಟಿಗೆ ಕೈ ಹಾಕಿದ್ದ ಬಿಜೆಪಿ ನಾಯಕರ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳ್ಳುವಂತೆ ಮಾಡಿ, ಹದ್ದಿನ ಕಣ್ಣಿನಿಂದ ಶಾಸಕರನ್ನು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕಾದಿದ್ದರು. ಕ್ಷಿಷ್ಟ ಹಾಗೂ ಸಮಸ್ಯಾತ್ಮಕ ಸಂದರ್ಭಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಶಿವಕುಮಾರ್ ಅವರು ಕಾಂಗ್ರೆಸ್ ಪಾಲಿನ ಆಪ್ತರಕ್ಷಕ ಎಂಬುದನ್ನು ಸಾಬೀತು ಮಾಡಿದ್ದಾರೆ.
ಡಿ.ಕೆ.ಶಿವಕುಮಾರ್ ಪರಿಣಾಮವಾಗಿ ವಿಶ್ವಾಸಮತಯಾಚನೆ ಮಾಡಲು ವಿಫಲರಾಗಿ ಬಿ.ಎಸ್.ಯಡಿಯೂರಪ್ಪ ಅವರು ಕೇವಲ 55 ಗಂಟೆಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಗಿತ್ತು.
ಕಾಂಗ್ರೆಸ್ ಸರಳ ಬಹುಮತ ಪಡೆಯುವುದು ಕಷ್ಟ ಎಂಬ ಸಾಧ್ಯತೆಗಳು ಕಂಡ ಕೂಡಲೇ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯದ ನಾಯಕರು ತ್ವರಿತ ಕಾರ್ಯಾಚರಣೆ ನಡೆಸಿ ಜೆಡಿಎಸ್ ನೊಂದಿಗೆ ಹೊಂದಾಣಿಕೆ ಸ್ಥಾಪಿಸಿದ್ದರು. ರಾಜ್ಯ ನಾಯಕರು ಶಾಸಕರನ್ನು ಸುಭದ್ರಗೊಳಿಸುವ ಹೊಣೆಗಾರಿಕೆಯನ್ನು ಡಿಕೆ.ಶಿವಕುಮಾರ್ ಸಹೋದರರ ಹೆಗಲಿಗೆ ಹಾಕಿದ್ದರು.
ಆದರೆ, ಶಿವಕುಮಾರ್ ಸಹೋದರರು ಎಲ್ಲಾ ಶಾಸಕರನ್ನು ಈಗಲ್ ಟನ್ ರೆಸಾರ್ಟ್'ಗೆ ಒಯ್ದರು. ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರವಹಿಸಿಕೊಂಡ ಕೂಡಲೇ ರೆಸಾರ್ಟ್ ಗೆ ಇದ್ದ ಭದ್ರತೆಯನ್ನು ಹಿಂತೆಗೆದುಕೊಂಡಿದ್ದರು. ಬಳಿಕ ಡಿ.ಕೆ.ಶಿವಕುಮಾರ್ ಅವರು ಕನಕಪುರದ ತಮ್ಮ ಕಾರ್ಯಕರ್ತನ್ನು ಕರೆಸಿಕೊಂಡು ರೆಸಾರ್ಟ್ ಸುತ್ತ ಭದ್ರ ಕಾವಲು ಹಾಕಿಸಿದರು.
ರಾಜ್ಯದಲ್ಲಿದ್ದರೆ, ಶಾಸಕರನ್ನು ಉಳಿಸಿಕೊಳ್ಳುವುದು ಕಷ್ಟ ಎಂಬುದು ಅರಿವಿಗೆ ಬರುತ್ತಿದ್ದಂತೆಯೇ ಎಲ್ಲಾ ಶಾಸಕರನ್ನು ಹೊರರಾಜ್ಯಕ್ಕೆ ಸಾಗಿಸಲು ಕಾಂಗ್ರೆಸ್ ತೀರ್ಮಾನಿಸಿತು. ಅದನ್ನು ಜಾರಿಗೆ ತಂದಿದ್ದು ಕೂಡ ಶಿವಕುಮಾರ್ ಅವರೇ. ಮತ್ತೆ ಶಾಸಕರನ್ನು ನಗರಕ್ಕೆ ಕರೆತಂದು ಅವರು ಮತ ಚಲಾಯಿಸುವವರೆಗೂ ಅವರ ಮೇಲೆ ಕಣ್ಗಾವಲಿಟ್ಟಿದ್ದು, ಯಾರೂ ಬಿಜೆಪಿಯ ಸಂಪರ್ಕಕ್ಕೆ ಬರದಂತೆತ ತಡೆದಿದ್ದು ಹಾಗೂ ಬಿಜೆಪಿ ವಶದಲ್ಲಿದ್ದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರು ಪಕ್ಷತ ತೆಕ್ಕೆಗೆ ಹಿಂತಿರುಗಿದಾ ಅವರನ್ನು ಕರೆದಿದ್ದು ಹಾಗೂ ವಿಪ್ ಜಾರಿಗೊಳಿಸಿದ್ದೂ ಕೂಡ ಡಿ.ಕೆ.ಶಿವಕುಮಾರ್.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos