ನವದೆಹಲಿ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಬುಧವಾರ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದು, ಈ ವೇಳೆ, ಹಿಂದೆ ಬದ್ಧ ವೈರಿಗಳಾಗಿದ್ದ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿಗಳಾದ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಅವರು ಇದೇ ಮೊದಲ ಬಾರಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ.
ಉತ್ತರ ಪ್ರದೇಶದಲ್ಲಿ ಇತ್ತೀಚಿಗೆ ನಡೆದ ಲೋಕಸಭೆ ಉಪ ಚುನಾವಣೆಯಲ್ಲಿ ಮಾಯಾವತಿ ಅವರ ಬಹುಜನ ಸಮಾಜ ಪಕ್ಷ ಮತ್ತು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಮಣಿಸಿದ್ದವು. ಆದರೂ ಈ ಇಬ್ಬರು ನಾಯಕರು ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ.
ಬೆಂಗಳೂರಿನಲ್ಲಿ ನಡೆಯುವ ಕುಮಾರಸ್ವಾಮಿ ಅವರ ಪ್ರಮಾಣವಚನ ಸಮಾರಂಭಕ್ಕೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರಿಗೆ ಆಹ್ವಾನ ಬಂದಿದೆ ಮತ್ತು ಅವರು ನಾಳೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ವಕ್ತಾರ ರಾಜೇಂದ್ರ ಚೌಧರಿ ಅವರು ಪಿಟಿಐಗೆ ತಿಳಿಸಿದ್ದಾರೆ.
ಇನ್ನು ಕುಮಾರಸ್ವಾಮಿ ಅವರು ನಿನ್ನೆ ಖುದ್ಧು ಮಾಯಾವತಿ ಅವರನ್ನು ಭೇಟಿ ಮಾಡಿ ಆಹ್ವಾನ ನೀಡಿದ್ದು, ಅವರು ಸಹ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಬಿಎಸ್ ಪಿ ನಾಯಕರೊಬ್ಬರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics