ಬೆಂಗಳೂರು: ಚುನಾವಣಾ ಪೂರ್ವ ಆಶ್ವಾಸನೆಯಂತೆ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ರೈತರ ಸಾಲ ಮನ್ನಾ ಮಾಡಬೇಕು ಇಲ್ಲದಿದ್ದರೆ ಪ್ರಣಾಳಿಕೆಯಲ್ಲಿನ ಆಶ್ವಾಸನೆಗಳು ಹುಸಿಯಾಗಲಿದೆ ಎಂದು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದ್ದಾರೆ.
ಶಿವಮೊಗ್ಗದಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜೆಡಿಎಸ್, ಚುನಾವಣಾ ಪ್ರಣಾಳಿಕೆ ಕೇವಲ ಬೋಗಸ್ ಆಗಿದ್ದು, ಕುಮಾರಸ್ವಾಮಿ ಒಬ್ಬ ಅವಕಾಶವಾದಿ ರಾಜಕಾರಣಿ ಎಂದು ದೂರಿದರು. ಸದ್ಯದಲ್ಲಿಯೇ ಅಧಿಕಾರಕ್ಕೆ ಬರಲಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಎಷ್ಟು ದಿನ ನಡೆಯುತ್ತದೆ ಎನ್ನುವ ಖಾತರಿ ಇಲ್ಲ. ಈ ಮೈತ್ರಿಕೂಟ ಭಿನ್ನಾಭಿಪ್ರಾಯಗಳ ಆಗರವಾಗಲಿದೆ ಎಂದು ಅವರು ಟೀಕಿಸಿದರು.
ಪ್ರಮಾಣ ವಚನ ಸ್ವೀಕರಿಸುವ ಮೊದಲೇ ಕುಮಾರಸ್ವಾಮಿ ಪೂರ್ಣ ಬಹುಮತ ಇಲ್ಲದ ಕಾರಣ ರೈತರ ಸಾಲ ಮನ್ನಾ ಅಸಾಧ್ಯ ಎಂದು ಹೇಳಿರುವುದು ರಾಜ್ಯದ ರೈತ ಸಮುದಾಯಕ್ಕೆ ಬಗೆದ ದ್ರೋಹ ಆರೋಪಿಸಿದರು.
ಎರಡೂ ಪಕ್ಷಗಳು ಪ್ರಣಾಳಿಕೆಯಲ್ಲಿ ನುಡಿದಂತೆ ನಡೆಯಬೇಕು. ಇಲ್ಲವೆ ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಕುಮಾರಸ್ವಾಮಿ ವಿಶ್ವಾಸ ಮತಯಾಚನೆ ವೇಳೆ ಕಾಂಗ್ರೆಸ್ ಶಾಸಕರು ಆತ್ಮಸಾಕ್ಷಿಯ ಮತ ಚಲಾಯಿಸುವ ಸಾಧ್ಯತೆ ಇದೆ. ಒಂದು ವೇಳೆ ಅಲ್ಲಿ ಜಯಿಸಿದರು ಈ ಸರ್ಕಾರದ ಆಯಸ್ಸು ಕೇವಲ 6 ತಿಂಗಳು’ ಎಂದು ಭವಿಷ್ಯ ನುಡಿದರು.