ರಾಜಕೀಯ

ಸ್ಪೀಕರ್ ಚುನಾವಣೆ: ರಮೇಶ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿ, ಬಿಜೆಪಿಯಿಂದ ಸುರೇಶ್ ಕುಮಾರ್ ನಾಮಪತ್ರ

Sumana Upadhyaya

ಬೆಂಗಳೂರು: ನಾಳೆ ವಿಧಾನಸಭೆ ಸ್ಪೀಕರ್ ಆಯ್ಕೆಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಿಂದ ಮಾಜಿ ಸಚಿವ ರಮೇಶ್ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.

ಅವರು ಇಂದು ಬೆಳಗ್ಗೆ ವಿಧಾನಸೌಧಕ್ಕೆ ಆಗಮಿಸಿ ವಿಧಾನಸಭೆ ಕಾರ್ಯದರ್ಶಿಗಳಿಗೆ ಸ್ಪೀಕರ್ ಹುದ್ದೆಗೆ ಉಮೇದುವಾರಿಕೆ ಸಲ್ಲಿಸಿದರು. 3 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರಮೇಶ್ ಕುಮಾರ್ ಅವರನ್ನು ಕಾಂಗ್ರೆಸ್-ಜೆಡಿಎಸ್ ಒಮ್ಮತದ ಮೂಲಕ ಸ್ಪೀಕರ್ ಹುದ್ದೆಯ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ನಾಳೆ ಮಧ್ಯಾಹ್ನ 12.15 ಗಂಟೆಗೆ ವಿಧಾನಸೌಧದಲ್ಲಿ ಸ್ಪೀಕರ್ ಆಯ್ಕೆಗೆ ಚುನಾವಣೆ ನಡೆಯಲಿದೆ.

ರಮೇಶ್ ಕುಮಾರ್ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಮುಖಂಡರಾದ ರಾಮಲಿಂಗಾ ರೆಡ್ಡಿ, ರೋಷನ್ ಬೇಗ್, ಕೆ.ಎಚ್.ಮುನಿಯಪ್ಪ, ಜಾರ್ಜ್ ಫೆರ್ನಾಂಡೀಸ್ ಮೊದಲಾದವರಿದ್ದರು.

ರಮೇಶ್ ಕುಮಾರ್ ಅವರಿಗೆ ಸಾಕಷ್ಟು ರಾಜಕೀಯ ಮತ್ತು ಕಾನೂನಿನ ಅನುಭವವಿದೆ. ಹೀಗಾಗಿ ಅವರನ್ನು ಒಮ್ಮತದಿಂದ ಆಯ್ಕೆ ಮಾಡಿದ್ದೇವೆ. ಅವರು ಗೆದ್ದು ಬರುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು.

ಈಗಾಗಲೇ ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸಲಾಗದೆ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಇನ್ನು ಸ್ಪೀಕರ್ ಚುನಾವಣೆಯಲ್ಲಿ ಕೂಡ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ. ಇನ್ನು ಸಂಜೆಯೊಳಗೆ ಸ್ಪರ್ಧಾ ಕಣದಿಂದ ಹಿಂದೆ ಸರಿಯಲೂಬಹುದು ಎಂದು ಸಿದ್ದರಾಮಯ್ಯ ಹೇಳಿದರು.

ಇನ್ನೊಂದೆಡೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರನ್ನು ಸ್ಪೀಕರ್ ಹುದ್ದೆಗೆ ಕಣಕ್ಕಿಳಿಸಿದೆ. ಸುರೇಶ್ ಕುಮಾರ್, ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅವರನ್ನು ಭೇಟಿಯಾಗಿ ಸ್ಪೀಕರ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಿದ್ದಾರೆ. ಮಲ್ಲೇಶ್ವರಂ ಶಾಸಕ ಅಶ್ವತ್ಥನಾರಾಯಣ್ ನಾಮಪತ್ರಕ್ಕೆ ಅನುಮೋದಕರಾಗಿ‌ ಸಹಿ ಹಾಕಿದರೆ, ಶಾಸಕ‌ ಸುನೀಲ್ ಕುಮಾರ್ ಸೂಚಕರಾಗಿ‌ ಸಹಿ ಹಾಕಿದರು.

ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸುರೇಶ್ ಕುಮಾರ್, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆಯಂತೆ ನಾಮಪತ್ರ ಸಲ್ಲಿಸಿದ್ದೇನೆ. ನಾಳೆ ಚುನಾವಣೆ ಇದೆ. ಏನಾಗುತ್ತೋ ನೋಡೋಣ. ನಮಗೆ ಸಂಖ್ಯಾಬಲ ಇದೆ, ಕಾದು ನೋಡಿ ಎಂದು ಹೇಳಿದರು.

ನಾಳೆಯೇ ಸದನದಲ್ಲಿ ವಿಶ್ವಾಸಮತ ನಡೆಯಲಿದೆ.

SCROLL FOR NEXT