ಬೆಂಗಳೂರು: ಕಾಂಗ್ರೆಸ್ - ಜೆಡಿಎಸ್ ಸರ್ಕಾರ ಐದು ವರ್ಷ ಸ್ಥಿರವಾಗಿರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ವಿಶ್ವಾಸಮತ ಯಾಚನೆ ಪ್ರಸ್ತಾಪ ಮಂಡಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ರಾಜ್ಯದ ಜನ ನನಗೆ ಸಂಪೂರ್ಣ ಬಹುಮತ ನೀಡದಿರುವ ಬಗ್ಗೆ ನನಗೂ ನೋವಿದೆ. ಆದರೂ ನಾವು ಸ್ಥಿರ ಸರ್ಕಾರ ನೀಡುತ್ತೇವೆ ವಿಶ್ವಾಸ ವ್ಯಕ್ತಪಡಿಸಿದರು.
ನಾವು ಜನರಿಗಾಗಿ ಕೆಲಸ ಮಾಡುತ್ತೇವೆ. ನಮ್ಮ ಸ್ವಹಿತಾಸಕ್ತಿಗಾಗಿ ಕೆಲಸ ಮಾಡುವುದಿಲ್ಲ. ನಾನಾಗಲಿ, ನಮ್ಮ ಕುಟುಂಬದವರಾಗಲಿ ಅಧಿಕಾರಕ್ಕೆ ಆಸೆ ಪಟ್ಟವರಲ್ಲ, ದೇವೇಗೌಡರು ಪ್ರಧಾನಿ ಹುದ್ದೆಯಿಂದ ಕೆಳಗಿಳಿದಾಗ ವಾಜಪೇಯಿ ಅವರು ಬೆಂಬಲ ನೀಡುವುದಾಗಿ ಒಂದು ಚೀಟಿ ಕಳುಹಿಸಿದ್ದರು ಆದರೆ ನನ್ನ ತಂದೆಯವರು ಬಿಜೆಪಿ ಜೊತೆ ಹೋಗಲ್ಲ ಎಂದು ಹೇಳಿದರು, ಕಾಂಗ್ರೆಸ್ ಪಕ್ಷದ ನೆರವಿನಿಂದ ನನ್ನ ತಂದೆ ಪ್ರಧಾನಿಯಾದರು, ಇಂದು ನಾನು ಮುಖ್ಯಮಂತ್ರಿಯಾದೆ ಎಂದರು.
ಇದೇ ವೇಳೆ 2006ರಲ್ಲಿ ಬಿಜೆಪಿ ಜೊತೆ ಸರ್ಕಾರ ರಚಿಸಿದನ್ನು ನೆನಪಿಸಿಕೊಂಡ ಕುಮಾರಸ್ವಾಮಿ, ಬಿಜೆಪಿಗೆ ಅಧಿಕಾರ ನೀಡದಿದ್ದಕ್ಕೆ ವಚನ ಭ್ರಷ್ಟ ಎಂಬ ಹಣೆಪಟ್ಟಿ ಕಟ್ಟಿದ್ದರು, ನಾನು ಖಂಡಿತವಾಗಿಯೂ ವಚನ ಭ್ರಷ್ಟ ಅಲ್ಲ, ಅಂದಿನ ಪರಿಸ್ಥಿತಿ, ಪಕ್ಷವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯ ಇತ್ತು ಎಂದರು.