ಬೆಂಗಳೂರು: ಸರ್ಕಾರ ರಚನೆಗೆ ಷರತ್ತುರಹಿತ ಬೆಂಬಲ ನೀಡಿದ ನಂತರ ಮುಂದಿನ 5 ವರ್ಷಗಳ ಕಾಲ ಒಬ್ಬರೇ ಮುಖ್ಯಮಂತ್ರಿ ಇರುತ್ತಾರಾ ಅಥವಾ ಕಾಂಗ್ರೆಸ್ ನಿಂದಲೂ ಮುಖ್ಯಮಂತ್ರಿ ಯಾರಾದರೂ ಆಗುತ್ತಾರಾ ಎಂಬ ಬಗ್ಗೆ ಕಾಂಗ್ರೆಸ್ ನಿಂದ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಹುದ್ದೆಯ ವಿಧಾನಗಳನ್ನು ಚರ್ಚಿಸಿ ಇನ್ನೂ ಅಂತಿಮಗೊಳಿಸಬೇಕಾಗಿದೆ. ಪ್ರಸ್ತಾವನೆಯ ಬಲ ಮತ್ತು ದೌರ್ಬಲ್ಯಗಳನ್ನು ನಾವು ವಿಶ್ಲೇಷಣೆ ನಡೆಸಬೇಕಾಗಿದೆ. ಈ ವಿಷಯದ ಕುರಿತು ಜಗಳ ಮಾಡಲು ನಮಗೆ ಇಷ್ಟವಿಲ್ಲ. ಸರಿಯಾದ ನಿರ್ಧಾರವನ್ನು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಲಾಗುವುದು ಎಂದರು.
ಸಿಎಂ ಅಧಿಕಾರಾವಧಿ ಬಗ್ಗೆ ಅನಿಶ್ಚಿತತೆ ಇದ್ದರೂ ಕೂಡ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತದೆ ಎಂಬ ವಿಶ್ವಾಸವನ್ನು ಪರಮೇಶ್ವರ್ ಅವರು ವ್ಯಕ್ತಪಡಿಸಿದ್ದಾರೆ. ನಮ್ಮ ಮೈತ್ರಿ ಸರ್ಕಾರ ಹೆಚ್ಚು ಸಮಯ ಅಧಿಕಾರ ನಡೆಸುವುದಿಲ್ಲ, ಅಲ್ಪ ಸಮಯದಲ್ಲಿಯೇ ಮೈತ್ರಿ ಮುರಿದುಹೋಗುತ್ತದೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಹಲವು ವಿಶ್ಲೇಷಣೆಗಳು ನಡೆಯುತ್ತಿವೆ. ಆದರೆ ನಮ್ಮ ಮೈತ್ರಿ ಸರ್ಕಾರ 5 ವರ್ಷ ಸಂಪೂರ್ಣ ಆಡಳಿತ ನಡೆಸುತ್ತದೆ ಎಂದು ನಾನು ಮತ್ತೊಮ್ಮೆ ಪ್ರತಿಪಾದಿಸುತ್ತೇನೆ ಎಂದು ಹೇಳಿದರು.
ಸಾಮಾನ್ಯ ಕನಿಷ್ಠ ಕಾರ್ಯಕ್ರಮ; ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣಾ ಪ್ರಣಾಳಿಕೆಯಲ್ಲಿ ಹಲವು ಸಾಮ್ಯತೆಗಳಿದ್ದವು.ಸಾಮಾನ್ಯ ಕಾರ್ಯಕ್ರಮಗಳನ್ನು ಒತ್ತಿಹೇಳುವ ಮೂಲಕ ಸರ್ಕಾರ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಜಾರಿಗೆ ತರಲಿದೆ. ಜನರಿಗೆ ಆದ್ಯತೆ ಮೇರೆಗೆ ಯಾವುದು ಅಗತ್ಯವಿದೆ, ಅಂತಹ ಯೋಜನೆಗಳನ್ನು ಆರಂಭದಲ್ಲಿ ಜಾರಿಗೆ ತರಲಾಗುವುದು ಎಂದರು.
ತಮಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗದಿದ್ದುದರ ಬಗ್ಗೆ ಡಿ ಕೆ ಶಿವಕುಮಾರ್ ಮತ್ತು ಎಂಬಿ ಪಾಟೀಲ್ ಅಸಮಾಧಾನಗೊಂಡಿದ್ದಾರೆ ಎಂಬ ವರದಿಗಳು ನಿಜವಲ್ಲ. ಪಕ್ಷದೊಳಗೆ ಯಾರಿಗೂ ಯಾವುದೇ ಅಸಮಾಧಾನವಿಲ್ಲ. ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯಾಗಲು ಅರ್ಹತೆ ಹೊಂದಿರುವವರು ಸಾಕಷ್ಟು ಜನ ಇದ್ದಾರೆ. ಹೀಗಾಗಿ ಅವರು ತಮ್ಮ ಆಯ್ಕೆಯ ಸ್ಥಾನಗಳನ್ನು ಕೇಳುವುದರಲ್ಲಿ ತಪ್ಪಿಲ್ಲ ಎಂದು ಪರಮೇಶ್ವರ್ ನುಡಿದರು. ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುತ್ತೀರಾ ಎಂದು ಕೇಳಿದಾಗ ಈ ಬಗ್ಗೆ ನನಗೆ ಯಾವುದೇ ಸೂಚನೆ ಸಿಕ್ಕಿಲ್ಲ. ಕಳೆದ ಬಾರಿ ನನಗೆ ಗೃಹ ಸಚಿವ ಮತ್ತು ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡಿದಾಗ ಕೆಪಿಸಿಸಿ ಅಧ್ಯಕ್ಷನಾಗಿ ಉಳಿಯಲು ತೀರ್ಮಾನಿಸಿದೆ. ಈ ಬಾರಿ ಕೂಡ ಅಂತಹ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದರು.