ಬೆಂಗಳೂರು: ವಿಧಾನಸಭೆಯ ಇಂದಿನ ಅಧಿವೇಶನದಲ್ಲಿ ರೈತರ ಸಾಲಮನ್ನಾ ಘೋಷಣೆ ಮಾಡದಿದ್ದರೆ ರಾಜ್ಯಾದ್ಯಂತ ಬಿಜೆಪಿ ಹೋರಾಟ ಆರಂಭಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದೆ.
ಈ ಕುರಿತು ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಜೆಡಿಎಸ್ ಈ ಹಿಂದೆ ಚುನಾವಣೆ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿತ್ತು. ಅದರಂತೆ ನಡೆದುಕೊಳ್ಳಬೇಕಾಗಿದೆ.
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ವಿಶ್ವಾಸಮತ ತೆಗೆದುಕೊಂಡ ನಡೆಯುವ ಅಧಿವೇಶನದಲ್ಲಿ ರಾಜ್ಯದ ರೈತರ 53 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡುವ ಕುರಿತು ಸ್ಪಷ್ಟವಾಗಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಯಾವ ರೀತಿ ಹೋರಾಟ ನಡೆಸಬೇಕೆಂದು ರೂಪುರೇಷೆಗಳನ್ನು ಮಾಡಿಕೊಂಡು ಸಿದ್ದರಾಗಲಿದ್ದೇವೆ ಎಂದು ಹೇಳಿದರು.
ವಿಧಾನಸಭೆಯಲ್ಲಿ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತು ನಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಲಿದ್ದೇವೆ.ಜೆಡಿಎಸ್ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಹೊರಟಿದೆ. ಹೀಗಾಗಿ ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ನಮ್ಮ ಹೋರಾಟ ಸರ್ಕಾರ ವಿರುದ್ಧವಲ್ಲ, ಅಥವಾ ಕಾಂಗ್ರೆಸ್ ವಿರುದ್ಧ ಅಲ್ಲ, ನಮ್ಮ ಹೋರಾಟ, ವಿರೋಧ ಇರುವುದು ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜೆಡಿಎಸ್ ವಿರುದ್ಧವಾಗಿದೆ ಎಂದು ಹೇಳಿದರು.
ಇನ್ನೊಂದೆಡೆ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಆರಂಭಗೊಂಡಿದೆ.