ಬೆಂಗಳೂರು: ಕರ್ನಾಟಕದಲ್ಲಿ ರಚನೆಯಾದ ಜೆಡಿಎಸ್-ಕಾಂಗ್ರೆಸ್ ನೂತನ ಮೈತ್ರಿ ಸರ್ಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಮಿತ್ರಪಕ್ಷ ಕಾಂಗ್ರೆಸ್ ನಲ್ಲಿ ಖಾತೆ ಹಂಚಿಕೆ ಸಂಬಂಧ ಕೆಲವು ’ಸಮಸ್ಯೆಗಳಿದೆ’ ಎಂದಿದ್ದಾರೆ.
"ಖಾತೆ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದವರಲ್ಲಿ ಕೆಲವು ಸಮಸ್ಯೆಗಳಿದೆ, ಆದರೆ ಸರ್ಕಾರ ಉರುಳಿಸುವ ಯೋಚನೆ ಇಲ್ಲ ಎಲ್ಲಾ ಸಮಸ್ಯೆಗಳು ಅತಿ ಶೀಘ್ರವಾಗಿ ಪರಿಹಾರ ಕಾಣಲಿದೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ ಸ್ಥಳೀಯ ಕಾಂಗ್ರೆಸ್ ನಾಯಕರು ಹೈಕಮಾಂಡ್ ಜತೆ ಮಾತುಕತೆ ನಡೆಸಿದ್ದಾರೆ. ವರಿಷ್ಠರ ತೀರ್ಮಾನದ ಬಳಿಕ ಸಂಪುಟ ವಿಸ್ತರಣೆ ಕಾರ್ಯ ಸುಗಮವಾಗಲಿದೆ ಎಂದರು.
ಸಾಲ ಮನ್ನಾ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ "ನಾನು ಈ ಸಮಸ್ಯೆಯನ್ನು ನನ್ನ ಪ್ರತಿಷ್ಠೆಯ ವಿಚಾರವಾಗಿ ತೆಗೆದುಕೊಳ್ಳುವುದಿಲ್ಲ. ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ .. ಅಧಿಕಾರಿಗಳು, ತಜ್ಞರು, ಸಂಬಂಧಪಟ್ಟವರ ಚರ್ಚೆ ಮಾಡಿ ಸೂಕ್ತ ನಿರ್ಧಾರಕ್ಕೆ ಬರುತ್ತೇನೆ "ಎಂದಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿಯಾಗಿ ವಿಧಾನಸಭೆಯಲ್ಲಿ ವಿಶ್ವಾಸಮತ ಗಳಿಸಿದ ಬಳಿಕ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರದ ಖಾತೆ ಹಂಚಿಕೆ ಕುರಿತು ಚರ್ಚೆ ಪ್ರಾರಂಭವಾಗಿದೆ. ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ, ಹಾಗೂ ವರಿಷ್ಥರೊಡನೆ ಚರ್ಚೆ ನಡೆಸುವುದಕ್ಕಾಗಿ ದೆಹಲಿಗೆ ತೆರಳಿದ್ದಾರೆ.
ಹೊಸ ಸಚಿವ ಸಂಪುಟದಲ್ಲಿ ಕಾಂಗ್ರೆಸ್ 22 ಮಂತ್ರಿಗಳನ್ನು ಮತ್ತು ಜೆಡಿ-ಎಸ್ 12 ಸಚಿವರನ್ನು ಹೊಂದಲಿದೆ ಎಂದು ಇದಾಗಲೇ ನಿರ್ಧಾರವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics