ಕುಟುಂಬದ ಜೊತೆ ಸಿದ್ದು ನ್ಯಾಮಗೌಡ
ಬಾಗಲಕೋಟೆ: ರಸ್ತೆ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ ಜಮಖಂಡಿ ಶಾಸಕ ಸಿದ್ದು ಬಿ. ನ್ಯಾಮಗೌಡ ಬ್ಯಾರೇಜ್ ಹೀರೋ ಎಂದೇ ಪ್ರಸಿದ್ದವಾಗಿದ್ದರು. ರೈತ ನಾಯಕರಾಗಿ ರಾಜಕೀಯ ಪ್ರವೇಶಿಸಿದ ಸಿದ್ದು ನ್ಯಾಮಗೌಡ 1991ರ ಲೋಕಸಭೆ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಿಂದ ರಾಮಕೃಷ್ಣ ಹೆಗಡೆ ಅವರನ್ನು ಪರಾಭವಗೊಳಿಸಿದ ನಂತರ ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದರು.
ರಾಜ್ಯ ರಾಜಕೀಯದಿಂದ ಕೆಲಕಾಲ ಮರೆಯಾಗಿದ್ದ ಸಿದ್ದು ನ್ಯಾಮಗೌಡ 2013 ಮತ್ತು 2018ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.
70 ವರ್ಷದ ಸಿದ್ದು ನ್ಯಾಮಗೌಡ ಅವರು ಕಾರಿನಲ್ಲಿ ವಾಪಸ್ ಬರುತ್ತಿದ್ದಾಗ ಬಾಗಲಕೋಟೆಯ ತುಳುಸಿಗೇರಿ ಬಳಿ ಎದುರಿಗೆ ಬರುತ್ತಿದ್ದ ಲಾರಿಯನ್ನು ತಪ್ಪಿಸಲು ಹೋಗಿ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಸಿದ್ದು ನ್ಯಾಮಗೌಡ ಅವರು ಮೃತಪಟ್ಟಿದ್ದಾರೆ.
ಸಿದ್ದು ನ್ಯಾಮಗೌಡ ಅವರ ನಿಧನದ ಸುದ್ದಿ ಕೇಳಿ ಬೌಗಲಕೋಟೆ ಜನತೆ ಆಘಾತ ವ್ಯಕ್ತ ಪಡಿಸಿದ್ದಾರೆ, 1980ರ ಸಮಯದಲ್ಲಿ ಅವರು ತೀರಾ ನಾಚಿಕೆಯ ಹಾಗೂ ವಿಧೇಯ ವ್ಯಕ್ತಿಯಾಗಿದ್ದರು. ನಿಧಾನವಾಗಿ ರೈತ ನಾಯಕನಾಗಿ ಹೊರ ಹೊಮ್ಮಿದರು. ಒಣ ಪ್ರದೇಶಗಳಲ್ಲಿ ನೀರಿಗಾಗಿ ಸಣ್ಣ ಜಲಾಶಯ ನಿರ್ಮಿಸಲು ಸಲಹೆ ನೀಡಿದರು. ಸರ್ಕಾರದ ಮೇಲೆ ಅವಲಂಬಿತರಾಗದೇ ತಮಗೆ ಅವಶ್ಯಕತೆಯಿರುವ ನೀರನ್ನು ತಾವೇ ಪಡೆದುಕೊಳ್ಳುವಂತೆ ಜಮಖಂಡಿ ರೈತರಿಗೆ ಸಲಹೆ ನೀಡಿ, ಆ ನಿಟ್ಟಿನಲ್ಲಿ ರೈತರನ್ನು ಒಗ್ಗೂಡಿಸಿ ಕೆಲಸ ಮಾಡಿದರು.
ತಮ್ಮ ಹಣ, ಸಮಯ ಎಲ್ಲವನ್ನು ವ್ಯಯಿಸಿ ದೇಣಿಗೆ ಸಂಗ್ರಹಿಸಿ 50 ಲಕ್ಷ ವೆಚ್ಚದಲ್ಲಿ ದೇಶದಲ್ಲಿ ಪ್ರಥಮವಾಗಿ ರೈತರ ಹಣದಲ್ಲಿ ಚಿಕ್ಕಪಡಸಲಗಿ ಬ್ಯಾರೇಜ್ ನಿರ್ಮಿಸಿದರು. ಮಳೆ ನಂಬಿ ಕೃಷಿ ಚಟುವಟಿಕೆ ನಡೆಸುತ್ತಿದ್ದ ಸುಮಾರು 27 ಗ್ರಾಮಗಳ ರೈತರಿಗೆ ಬೇಸಿಗೆಯಲ್ಲೂ ಕೃಷಿ ಚಟುವಟಿಕೆ ನಡೆಸಲು ಅನುಕೂಲ ಮಾಡಿಕೊಟ್ಟರು.
1985 ರಲ್ಲಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಬಳಿ ಚಿಕ್ಕಪಡಸಲಗಿಯಲ್ಲಿ ಜಲಾಶಯ ನಿರ್ಮಾಣ ಮಾಡಲು ಅನುದಾನ ನೀಡುವಂತೆ ಕೋರಿದರು. ಆದರೆ ಅನುದಾನ ನೀಡುವ ಮೊದಲು 5 ಲಕ್ಷ ರು ಸಂಗ್ರಹ ಮಾಡುವಂತೆ ಹೆಗಡೆ ಸೂಚಿಸಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ ಸಿದ್ದು, ಕೃಷ್ಣಾ ತೀರದರೈತ ಸಂಘ ಹೆಸರಿನಲ್ಲಿ ಕೃಷ್ಣಾ ಬ್ಯಾಂಕ್ ರೈತರ ಸಂಘ ಸ್ಥಾಪಿಸಿ ಪ್ರತಿಯೊಬ್ಬ ರೈತರಿಂದ 500 ರು ಹಣ ಸಂಗ್ರಹಿಸಿದರು. ಸುಮಾರು 30 ಹಳ್ಳಿಗಳ ಜನರು, ತಮ್ಮ ಹಣ ಹಾಗೂ ಭೂಮಿಯನ್ನು ನೀಡಿದರು, ಕೆಲವರು ತಮ್ಮ ಬಳಿಯಲ್ಲಿದ್ದದ್ದನ್ನು ಮಾರಿ ಜಲಾಶಯ ನಿರ್ಮಾಣ ಮಾಡಲು ಧನ ಸಹಾಯ ಮಾಡಿದರು. ಒಂದು ವಾರದೊಳಗೆ ತಮ್ಮ ಟಾರ್ಗೆಟ್ ಮುಟ್ಟಿದರು., ನಂತರ ಸಿಎಂ ಅವರನ್ನು ಭೇಟಿ ಮಾಡಿ ತಾವು ಹಣ ಸಂಗ್ರಹಿಸಿರುವ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಿದರು. ಅದಾದ ನಂತರ ಬೆಳಗಾವಿ ಜಿಲ್ಲಾ ಪರಿಷದ್ ಅಧ್ಯಕ್ಷ ಅಮರಸಿಂಹ ಪಾಟೀಲ್ ಸಣ್ಣ ಬ್ಯಾರೇಜ್ ನಿರ್ಮಾಣಕ್ಕಾಗಿ 5 ಲಕ್ಷ ರು ಹಣ ಬಿಡುಗಡೆ ಮಾಡಿದರು. ಕಪಾರ್ಟ್ ಯೋಜನೆಯಡಿ ಕೇಂದ್ರ ಸರ್ಕಾರ 28 ಲಕ್ಷ ರು ಹಣ ಬಿಡುಗಡೆ ಮಾಡಿತು.
ಚಿಕ್ಕಪಡಸಲಗಿಯಲ್ಲಿ ಬ್ಯಾರೇಜ್ ನಿರ್ಮಿಸಿದ ನಂತರ ಸಿದ್ದು ನ್ಯಾಮಗೌಡ ಬ್ಯಾರೇಜ್ ಹೀರೋ ಎಂದು ಪ್ರಸಿದ್ದರಾದರು, 1991ರಲ್ಲಿ ನಡೆದ ಲೋಕಸಭೆ ಚುನಾವಣೆಗೆ ಬಾಗಲಕೋಟೆಯಿಂದ ರಾಮಕೃಷ್ಣ ಹೆಗೆಡೆ ನಾಮಪತ್ರ ಸಲ್ಲಿಸಿದರು, ಹೆಗಡೆ ವಿರುದ್ಧ ಕಣಕ್ಕಿಳಿಸಲು ಕಾಂಗ್ರೆಸ್ ಪ್ರಭಾವಿ ಅಭ್ಯರ್ಥಿಯ ಹುಡುಕಾಟದಲ್ಲಿತ್ತು ಅಷ್ಟರಲ್ಲಾಗಲೇ ಬ್ಯಾರೇಜ್ ನಿರ್ಮಿಸಿ ಪ್ರಸಿದ್ಧರಾಗಿದ್ದ ಸಿದ್ದು ನ್ಯಾಮಗೌಡ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತು, ರಾಮಕೃಷ್ಣ ಹೆಗಡೆ ಅವರನ್ನು ಸಿದ್ದು ನ್ಯಾಮಗೌಡ ಅವರು 22ಸಾವಿರ ಮತಗಳ ಅಂತರದಿಂದ ಸೋಲಿಸಿದರು. 1949 ರಲ್ಲಿ ಜನಿಸಿದ ಸಿದ್ದು ನ್ಯಾಮಗೌಡ ಪಿ.ವಿ ನರಸಿಂಹ ರಾವ್ ಅವರ ಸರ್ಕಾರದಲ್ಲಿ ಕಲ್ಲಿದ್ದಲು ಸಚಿವರಾಗಿದ್ದರು, ಜೊತೆಗೆ ವಿಧಾನ ಪರಿಷತ್ ಸದಸ್ಯರಾಗಿಯೂ ಆಯ್ಕೆಯಾಗಿದ್ದರು.ಜಮಖಂಡಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.