ರಾಜಕೀಯ

ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಂಡು ಜನರು ನನಗೆ ಮತ ಹಾಕಿದ್ದಾರೆ- ಶಾಸಕ ಮುನಿರತ್ನ

Sumana Upadhyaya

ಬೆಂಗಳೂರು: ನಾನು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿಪರ ಕೆಲಸಗಳನ್ನು ನೋಡಿ ಜನ ನನಗೆ ಮತ ಹಾಕಿ ಆಶೀರ್ವಾದ ಮಾಡಿದ್ದಾರೆ ಎಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಇಂದಿನ ಫಲಿತಾಂಶದಲ್ಲಿ ಗೆಲುವು ಕಂಡಿರುವ ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ.

ರಾಜರಾಜೇಶ್ವರಿ ನಗರ ಕ್ಷೇತ್ರದ ಫಲಿತಾಂಶ ಹೊರಬಂದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನರಿಗೆ ನಾನು ಆಭಾರಿಯಾಗಿದ್ದೇನೆ. ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸ ನನ್ನ ಗೆಲುವಿಗೆ ಕಾರಣವಾಗಿದೆ ಎಂದರು.

ರಾಜರಾಜೇಶ್ವರಿ ನಗರ ಕ್ಷೇತ್ರದ ಜನತೆ ಚೆನ್ನಾಗಿಯೇ ಆಲೋಚನೆ ಮಾಡಿಯೇ ಮತ ಹಾಕಿದ್ದಾರೆ. ಇಲ್ಲಿನ ಮತದಾರರು ಯಾವುದೇ ಜಾತಿ ಧರ್ಮ ನೋಡಿ ಮತ ಹಾಕಿಲ್ಲ. ನಾನು ಹಣಬಲದಿಂದ ಗೆದ್ದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ‌ಯಡಿಯೂರಪ್ಪ ಆರೋಪ ಮಾಡಿದ್ದಾರೆ. ಬಿಜೆಪಿ ಅಧಿಕಾರದ ಅವಧಿಯಲ್ಲಿ  ಆರ್‌.ಆರ್.ನಗರ ಕ್ಷೇತ್ರದ ಅಭಿವೃದ್ಧಿ ಹೇಗಿತ್ತು, ಈಗ ಹೇಗಿದೆ ಅಂತ ಅವಲೋಕನ ಮಾಡಿ ಮಾತನಾಡಲಿ’ ಎಂದು ತಿರುಗೇಟು ನೀಡಿದರು.

ನನ್ನ ಮೇಲೆ ಎಷ್ಟೇ ಆರೋಪ, ಕುತಂತ್ರಗಳು ನಡೆದರು ಮತದಾರ ನನ್ನ ಕೈಬಿಡಲಿಲ್ಲ. ಇದು ರಾಜ್ಯಕ್ಕೆ ಮಾದರಿಯಾದ ಗೆಲುವು. ಮುಂದಿನ ದಿನಗಳಲ್ಲಿ ಮತ್ತಷ್ಟು ಕೆಲಸ ಮಾಡುತ್ತೇನೆ ಎಂದು ಮುನಿರತ್ನ ಆಶ್ವಾಸನೆ ನೀಡಿದರು.

ಚುನಾವಣೆ ಮುಂದೂಡಿದ್ದು ನನಗೆ ಸಹಕಾರಿ ಆಯ್ತು. ತಪ್ಪು ತಿಳುವಳಿಕೆಯಿಂದ ಬಿಜೆಪಿ ಕಡೆ ಹೋಗುತ್ತಿದ್ದ ಮತಗಳು ಮತ್ತೆ ನಮ್ಮ ಕಡೆ ಬರುವಂತಾಯ್ತು ಎಂದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಡಿಕೆ ಶಿವಕುಮಾರ್, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ನಂತರ ಕಾಂಗ್ರೆಸ್‌ ಪರಿಸ್ಥಿತಿಯನ್ನು ಎಲ್ಲರೂ ಗಮನಿಸಿದ್ದಾರೆ. ಪಕ್ಷಕ್ಕೆ ಕೆಟ್ಟ ಹೆಸರು ತರಲು ಸಾಕಷ್ಟು ಕೆಲಸ ಮಾಡಲಾಯಿತು.  ಆದರೆ, ರಾಜರಾಜೇಶ್ವರಿ ನಗರದ ಮತದಾರರು ಸರಿಯಾದ ಫಲಿತಾಂಶ ನೀಡಿದ್ದಾರೆ ಎಂದು ಹೇಳಿದರು.

SCROLL FOR NEXT