ಬೆಂಗಳೂರು: 2019ರ ಲೋಕಸಭೆ ಚುನಾವಣೆ ನನ್ನ ಜೀವನದ ಕೊನೆ ಯುದ್ಧ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಮಂಗಳವಾರ ಹೇಳಿದ್ದಾರೆ.
ಐದು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮುನ್ನ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿವೆ ಎಂದರು.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಒಟ್ಟಿಗೆ ಎದುರಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ನಿರ್ಧರಿಸಿವೆ. ಎರಡೂ ಪಕ್ಷಗಳ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡುವ ವಿಶ್ವಾಸವಿದೆ ಎಂದು ಮಾಜಿ ಪ್ರಧಾನಿ ತಿಳಿಸಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಏನೇ ಭಿನ್ನಾಭಿಪ್ರಾಯವಿದ್ದರೂ ಅದು ಮುಗಿದ ಅಧ್ಯಾಯ. ನಾವು ಹಿಂದಿನದನ್ನು ಮರೆತು ಮುಂದೆ ಒಗ್ಗಟ್ಟಿನಿಂದ ಹೋಗಲು ನಿರ್ಧರಿಸಿದ್ದೇವೆ. ಮುಂದಿನ ಲೋಕಸಭೆ ಚುನಾವಣೆ ನನ್ನ ಜೀವನದ ಕೊನೆ ಹೋರಾಟ ಎಂದರು.
ಇದೇ ವೇಳೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಸಹಕಾರದೊಂದಿಗೆ ಶೀಘ್ರದಲ್ಲೇ ಎರಡನೇ ಬಾರಿ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ. ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಅವರು ಬೆಂಗಳೂರಿಗೆ ಬಂದಿದ್ದಾರೆ. ಮುಖ್ಯಮಂತ್ರಿ ಹಾಗೂ ವೇಣುಗೋಪಾಲ್ ಇಬ್ಬರು ಚರ್ಚಿಸಿ, ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದರು.