ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಚಿತ್ರದುರ್ಗ: ಟಿಪ್ಪು ಜಯಂತಿ ವಿವಾದ ಸಂಬಂಧ ಬಿಜೆಪಿ ವಿರುದ್ದ ತೀವ್ರವಾಗಿ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಬಿಜೆಪಿ ಕೋಮುಗಲಭೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನುಷ್ಯರನ್ನು ದ್ವೇಷ ಮಾಡುವವರು ಮತಾಂಧರು, ಅಂತಹ ಕೆಲಸವನ್ನು ಬಿಜೆಪಿ ಪಕ್ಷದವರು ಮಾಡುತ್ತಾರೆ ನಾವಲ್ಲ. ನಾವು ಒಗ್ಗೂಡಿಸುವ ಕೆಲಸ ಮಾಡುತ್ತೇವೆಂದು ಹೇಳಿದ್ದಾರೆ.
ಚರಿತ್ರೆ ಓದಿಕೊಳ್ಳದೆ ಮಾತನಾಡುವವರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ನಾವು ಬಂದಿರುವುದೇ ಸಂವಿಧಾನ ಬದಲಾವಣೆ ಮಾಡಲು ಎಂದು ಹೇಳುತ್ತಾರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂಥ ಬಾಯಲ್ಲಿ ಮಾತ್ರ ಹೇಳುತ್ತಾರೆ. ಸಮಾಜ ಛಿದ್ರ ಮಾಡುವವರು ಬಿಜೆಪಿಯವರು, ನಾವು ಸಮಾಜವನ್ನು ಒಗ್ಗೂಡಿಸುತ್ತಿದ್ದೇವೆ. ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷ. ಕಾಂಗ್ರೆಸ್ ಕರ್ನಾಟಕದಲ್ಲಿ ಪ್ರಬಲವಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಟಿಪ್ಪು ಜಯಂತಿಗೆ ಸಿಎಂ ಕುಮಾರಸ್ವಾಮಿಯವರು ಗೈರು ಹಾಜರಾಗಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ವೈದ್ಯರ ಸಲಹೆ ಮೇರೆಗೆ ಅವರು ಕಾರ್ಯಕ್ರಮಕ್ಕೆ ಗೈರು ಹಾಜರಾಗಿರಬಹುದು ಎಂದಿದ್ದಾರೆ.
ಬಳಿಕ ಜನಾರ್ಧನ ರೆಡ್ಡಿ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಅವರಿಗೆ ಲೂಟಿ ಮಾಡು, ಕಳ್ಳತನ ಮಾಡು ಎಂದು ನಾವು ಹೇಳಿಕೊಟ್ಟಿದ್ದೆವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.