ಬೆಂಗಳೂರು: ಗುಪ್ತಚರ ವರದಿ ಕುರಿತಾಗಿ ನಿಖಿಲ್ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಇದೀಗ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದ್ದು, ಈ ಬಗ್ಗೆ ಕಿಡಿಕಾರಿರುವ ಬಿಜೆಪಿ ಮುಖಂಡ ಸುರೇಶ್ ಕುಮಾರ್ ಅವರು ಟ್ವಿಟರ್ ನಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೈತರ ಪ್ರತಿಭಟನೆ ಕುರಿತಂತೆ ಈ ಹಿಂದೆ ಗೂಂಡಾಗಳು ಎಂದು ಹೇಳಿಕೆ ನೀಡಿ ಸಿಎಂ ಕುಮಾರಸ್ವಾಮಿ ಅವರು ಸುದ್ದಿಗೆ ಗ್ರಾಸವಾದ ಬೆನ್ನಲ್ಲೇ ಅವರ ಪುತ್ರ ನಿಖಿಲ್ ಅವರೂ ಕೂಡ ಇದೀಗ ಗುಪ್ತಚರ ವರದಿಗೆ ಸಂಬಂಧಿಸಿದ ಹೇಳಿಕೆ ನೀಡಿ ಇದೀಗ ಸುದ್ದಿಗೆ ಗ್ರಾಸವಾಗಿದ್ದಾರೆ.
ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ನಿಖಿಲ್, ತಮಗೆ ಸಿಕ್ಕ ಗುಪ್ತಚರ ವರದಿಯ ಅನ್ವಯ ಎಂಬ ಪದ ಬಳಕೆ ಮಾಡಿದ್ದು, ಇದೇ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಬಿಜೆಪಿ ಮುಖಂಡ ಸುರೇಶ್ ಕುಮಾರ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು ಗುಪ್ತಚರ ವರದಿ ಪಡೆಯಲು ನಿಖಿಲ್ ಕುಮಾರಸ್ವಾಮಿ, ಮುಖ್ಯಮಂತ್ರಿ, ಗೃಹಮಂತ್ರಿಯೋ ಎಂದು ಕಿಡಿಕಾರಿದ್ದಾರೆ. ಅಲ್ಲದೆ ಈ ಬಗ್ಗೆ ನಿಖಿಲ್ ನೀಡಿರುವ ಹೇಳಿಕೆಯ ವಿಡಿಯೋ ಟ್ವೀಟ್ ಮಾಡಿ ಮುಖ್ಯಮಂತ್ರಿಗಳ ಸ್ಪಷ್ಟನೆ ಕೋರಿದ್ದಾರೆ.
'ಗುಪ್ತಚರ ವರದಿ ಅಷ್ಟು ಸಸ್ತಾ ಆಗೋಗಿದೆಯೇ? ಗುಪ್ತಚರ ವರದಿ ಸಿಗೋದಕ್ಕೆ ನಿಖಿಲ್ ಕುಮಾರಸ್ವಾಮಿಯವರ "ಅಧಿಕಾರ" ಏನು? ಮುಖ್ಯಮಂತ್ರಿಗಳ ಮಗನಾಗಿದ್ದಕ್ಕೆ ಈ ಮಹದವಕಾಶವೇ? ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು. ನಿಖಿಲ್ ಮುಖ್ಯಮಂತ್ರಿಯೇ ? ಗ್ರಹ ಮಂತ್ರಿಯೇ? ಅಪ್ಪ ಮಕ್ಕಳ ರಾಜಕಾರಣದಲ್ಲಿ ಕಾನೂನು ಕಾಲ ಕಸ' ಎಂದು ಸುರೇಶ್ ಕುಮಾರ್ ಕಿಡಿಕಾರಿದ್ದಾರೆ.