ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಮುಂದೂಡುವುದಕ್ಕೆ ರಾಜ್ಯದ ಆಡಳಿತಾರೂಢ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಹೊಸ ನೆಪವೊಂದು ದೊರಕಿದ್ದು, ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯ ಕಾರಣವನ್ನು ಮುಂದಿಟ್ಟುಕೊಂಡು ಅನಿರ್ದಿಷ್ಟಾವಧಿಗೆ ವಿಸ್ತರಣೆ ಮುಂದೂಡಲು ಎರಡೂ ಪಕ್ಷಗಳ ಮುಖಂಡರು ಮುಂದಾಗಿದ್ದು, ಹೀಗಾಗಿ ಸಚಿವ ಸ್ಥಾನದ ಆಕಾಂಕ್ಷಿಗಳ ಕನಸು ಮತ್ತೆ ಭಗ್ನವಾಗಿದೆ.
ಅಕ್ಟೋಬರ್ 10 ಅಥವಾ 12 ರಂದು ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಕೆಲ ಖಾತೆ ಬದಲಾವಣೆ ಮಾಡಲಾಗುತ್ತದೆ ಎಂದು ಕೆಲ ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೇಳಿದ್ದರು. ಹೀಗಾಗಿ ಸಂಪುಟ ಸೇರಿವ ನಾಯಕರ ಆಸಕೆ ಗರಿಗೆದರಿತ್ತು.
ಪಿತೃಪಕ್ಷದ ಬಳಿಕ ಸಂಪುಟ ವಿಸ್ತರಣೆ ಮಾಡಲು ಚಿಂತನೆ ನಡೆಸಲಾಗಿತ್ತು. ಇದೀಗ ಉಪ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಹೀಗಾಗಿ ಸಂಪುಟ ವಿಸ್ತರಣೆ ಕುರಿತು ಮತ್ತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಇತರೆ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಚುನಾವಣಾ ಪ್ರಚಾರದತ್ತ ಕಾರ್ಯನಿರತವಾಗಿದ್ದು, ಈ ಹಿನ್ನಲೆಯಲ್ಲಿ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಎಂ.ಬಿ. ಪಾಟೀಲ್, ರಾಮಲಿಂಗಾ ರೆಡ್ಡಿ, ಹೆಚ್.ಕೆ. ಪಾಟೀಲ್ ಮತ್ತು ರೋಷನ್ ಬೇಗ್ ಸೇರಿ ಹಲವರು ಸಂಪುಟ ಸೇರ್ಪಡೆಗೊಳ್ಳುವ ಆಸೆಯಿಟ್ಟುಕೊಂಡಿದ್ದು. ಬಿ. ನಾಗೇಂದ್ರ, ಎಂ.ಟಿ.ಬಿ ನಾಗರಾಜ್ ಹಾಗೂ ಇತರೆ ನಾಯಕರು ಸಚಿವ ಸ್ಥಾನಕ್ಕೆ ಭಾರೀ ಲಾಬಿ ಕೂಡ ನಡೆಸುತ್ತಿದ್ದರು.