ರಾಜಕೀಯ

ಸತ್ತ ಕುದುರೆಗಳೆಲ್ಲ ಮಾತನಾಡುವಂತಾಗಿದೆ: ಚಲುವರಾಯಸ್ವಾಮಿ ವಿರುದ್ಧ ಸಚಿವ ಪುಟ್ಟರಾಜು ವಾಗ್ದಾಳಿ

Shilpa D
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆ. ಯಾರ ಬಳಿಯೂ ನಮಗೆ ಅಂಗಲಾಚಬೇಕಾದ ಸ್ಥಿತಿ ಇಲ್ಲ. ಮೈತ್ರಿಗಾಗಿ ಯಾರೂ ಗೋಗೆರೆಯುತ್ತಿಲ್ಲ ಎಂದು ಸಚಿವ ಸಿ.ಎಸ್‌.ಪುಟ್ಟರಾಜು ಕಾಂಗ್ರೆಸ್‌ ನಾಯಕ ಚಲುವರಾಯಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ
ಮಂಡ್ಯದ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡೆಡ್ ಹಾರ್ಸ್ ಗಳೆಲ್ಲಾ ಮಾತನಾಡುವ ಹಾಗಾಗಿದೆ ಎಂದು ಚೆಲುವರಾಯಸ್ವಾಮಿ ಅವರನ್ನು ಸತ್ತ ಕುದುರೆಗೆ ಹೋಲಿಸಿದ್ದಾರೆ.
ಇತಿಹಾಸದಲ್ಲಿ 52 ಸಾವಿರ ಲೀಡ್ ನಲ್ಲಿ ನಾಗಮಂಗಲದಲ್ಲಿ ಗೆದ್ದಿದ್ದು ನೋಡಿದ್ದೀರಾ. ಚೆಲುವರಾಯಸ್ವಾಮಿ ಅವರನ್ನು ಜನರು ಸ್ವಲ್ಪ ಬಾಯಿಮುಚ್ಚಿಕೊಂಡು ಇರಲಿ ಎಂದು ಜನ ಸೋಲಿಸಿ ಕಳುಹಿಸಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆಗೆ ನಮ್ಮ ಪಕ್ಷದಲ್ಲಿ ಸಮರ್ಥರಿದ್ದಾರೆ. ಸ್ಪರ್ಧೆಯೂ ಇದೆ. ಅಂತಿಮವಾಗಿ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು, ಸಿಎಂ ಕುಮಾರ ಸ್ವಾಮಿ ತೀರ್ಮಾನ ಮಾಡುತ್ತಾರೆ. ಹೀಗೆ ತೀರ್ಮಾನ ಮಾಡಿದ ಅಭ್ಯರ್ಥಿಯನ್ನು ಅತ್ಯಂತ ಅಂತರದಿಂದ ಮಂಡ್ಯ ಲೋಕಸಭಾ ಕ್ಷೇತ್ರದ ಜನತೆ ಗೆಲ್ಲಿಸಿಕೊಡುತ್ತಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈತ್ರಿ ಬೇಕು ಅಂತ ಮಂಡ್ಯದಲ್ಲಿ ಯಾರೂ ಗೋಗರೆಯುತ್ತಿಲ್ಲ. ಜನ ಕೊಟ್ಟ ತೀರ್ಪಿನಿಂದ ಅನಿವಾರ್ಯತೆ ಬಂದ ಕಾರಣ ಈ ರಾಜ್ಯದಲ್ಲಿ ಇಂದು ಸಮ್ಮಿಶ್ರ ಸರ್ಕಾರ ಆಗಿದೆ. ಆ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್ ಸುಭದ್ರವಾಗಿದೆ. ಹೀಗಾಗಿ ಇಂದು ನಾವು ಯಾರನ್ನೂ ಅಂಗಲಾಚುವ ಅಗತ್ಯತೆ ಇಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ನಿಟ್ಟಿನಲ್ಲಿ ನಾಯಕರು ಮೈತ್ರಿಗೆ ಸಮ್ಮತಿಸಿದ್ರು. ಹೀಗಾಗಿ ಎರಡೂ ಪಕ್ಷದ ನಾಯಕರು ತೀರ್ಮಾನಕ್ಕೆ ನಾನೂ ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ. 
SCROLL FOR NEXT