ರಾಜಕೀಯ

ಧರ್ಮಸ್ಥಳದಲ್ಲಿ ಬಿ ಫಾರಂಗೆ ಪೂಜೆ ಮಾಡಿಸಿದ ಅನಿತಾ ಕುಮಾರಸ್ವಾಮಿ, ಸೋಮವಾರ ನಾಮಪತ್ರ ಸಲ್ಲಿಕೆ

Lingaraj Badiger
ಮಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನಂತರ ಈಗ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರ ದೇವಸ್ಥಾನ ದರ್ಶನ ಯಾತ್ರೆ ಆರಂಭವಾಗಿದ್ದು, ಶುಕ್ರವಾರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥಸ್ವಾಮಿಗೆ ಶತರುದ್ರಾಭಿಷೇಕ ಮಾಡಿಸಿದರು.
ಇಂದು ಬೆಳಗ್ಗೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ಆಗಮಿಸಿದ ಅನಿತಾ ಕುಮಾರಸ್ವಾಮಿ, ಮಂಜುನಾಥನ ದರ್ಶನ ಪಡೆದರು. ಬಳಿಕ ದೇವರ ಸನ್ನಿಧಿಯಲ್ಲಿ ಬಿ ಫಾರ್ಮ್ ಇಟ್ಟು ವಿಶೇಷ ಪೂಜೆ ಮಾಡಿಸಿದರು.
ಈ ವೇಳೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆರ್ಶೀವಾದ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅನಿತಾ ಕುಮಾರಸ್ವಾಮಿ, ಸೋಮವಾರ ರಾಮನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅನಿತಾ ಕುಮಾರಸ್ವಾಮಿ ಧರ್ಮಸ್ಥಳದಿಂದ ಶೃಂಗೇರಿಗೆ ತೆರಳಲಿದ್ದು, ಅಲ್ಲಿ ತಾಯಿ ಶಾರದಾಂಬೆ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇತ್ತ ಉಪ ಚುನಾವಣೆಯಲ್ಲಿ ರಾಮನಗರದಲ್ಲಿ ಟಿಕೆಟ್ ಸಿಕ್ಕಿದ ಹಿನ್ನೆಲೆಯಲ್ಲಿ ಗೆಲುವಿಗಾಗಿ ಅನಿತಾ ಕುಮಾರಸ್ವಾಮಿ ದೇವರ ಮೊರೆ ಹೋಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಜೆಡಿಎಸ್ ಅಭ್ಯರ್ಥಿಗಳ ಬಿ ಫಾರಂಗೆ ವಿಶೇಷ ಪೂಜೆ ನಡೆಸುವುದು ಇದೇ ಹೊಸದೆನಲ್ಲ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ಎಚ್ ಡಿ ರೇವಣ್ಣ ಅವರು ತಿರುಪತಿಗೆ ತೆಗೆದುಕೊಂಡು ಹೋಗಿ ಪೂಜೆ ಮಾಡಿಸಿದ್ದರು. ಅಲ್ಲದೆ ಮೊನ್ನೆ ಅನಿತಾ ಕುಮಾರಸ್ವಾಮಿ ಅವರ ಬಿ ಫಾರಂಗೂ ರೇವಣ್ಣ ಪೂಜೆ ಮಾಡಿಸಿದ್ದರು.
SCROLL FOR NEXT