ಬಳ್ಳಾರಿ: ಬಳ್ಳಾರಿ ಲೋಕಸಭಾ ಉಪ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯ ವಿ ಎಸ್ ಉಗ್ರಪ್ಪ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದ್ದು, ಸ್ಥಳೀಯ ಮುಖಂಡರಿಗೆ ತೀವ್ರ ಮುಖಭಂಗವಾಗಿದೆ.
ಬಳ್ಳಾರಿ ಅಭ್ಯರ್ಥಿ ಆಯ್ಕೆ ಸಂಬಂಧ ಕಾಂಗ್ರೆಸ್ ಮುಖಂಡ ನಾಲ್ಕೈದು ಸಭೆಗಳನ್ನು ನಡೆಸಿದ್ದರೂ ಒಮ್ಮತಕ್ಕೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೊನೇ ಗಳಿಗೆಯಲ್ಲಿ ಬಳ್ಳಾರಿ ವಿಎಸ್ ಉಗ್ರಪ್ಪ ಅವರ ಹೆಸರನ್ನು ಇಂದು ಅಧಿಕೃತವಾಗಿ ಘೋಷಿಸಲಾಗಿದೆ.
ಕಾಂಗ್ರೆಸ್ ಸ್ಥಳೀಯ ಮುಖಂಡರಾದ ದೇವೇಂದ್ರಪ್ಪ, ನೆಟ್ಕಲ್ಲಪ್ಪ, ಶಾಸಕ ನಾಗೇಂದ್ರ ಅವರ ಸಹೋದರ ವೆಂಕಟೇಶ್ ಪ್ರಸಾದ್ ಸೇರಿದಂತೆ ನಾಲ್ಕು ಮಂದಿ ಪ್ರಮುಖವಾಗಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ ಸ್ಥಳೀಯ ಮಟ್ಟದಲ್ಲಿ ಯಾರನ್ನೇ ಆಯ್ಕೆ ಮಾಡಿದರು ಬಂಡಾಯ ಭುಗಿಲೇಳುವ ಆತಂಕ ಎದುರಾಗಿತ್ತು. ಕಾಂಗ್ರೆಸ್ ಹಿರಿಯ ಮುಖಂಡ ವಿಎಸ್ ಉಗ್ರಪ್ಪ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.
ವಿ.ಎಸ್.ಉಗ್ರಪ್ಪ ಅವರ ಹೆಸರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದ್ದು, ಸ್ಥಳೀಯವಾಗಿ ಕೇಳಿ ಬಂದಿರುವ ಹೆಸರುಗಳಿಗೆ ಬಹಳಷ್ಟು ಆಕ್ಷೇಪಗಳು ವ್ಯಕ್ತವಾಗಿರುವುದರಿಂದ ಉಗ್ರಪ್ಪ ಅವರನ್ನು ಕಣಕ್ಕಿಳಿಸಿದರೆ ಎಲ್ಲರೂ ಬೆಂಬಲಿಸಲು ಸಾಧ್ಯ ಎಂಬ ವಿಷಯವನ್ನು ಮಾಜಿ ಸಿಎಂ ಹೇಳಿದ್ದರು ಎನ್ನಲಾಗಿದೆ.
ವಕೀಲ ವೃತ್ತಿಯಿಂದ ರಾಜಕಾರಣಿಯಾಗಿರುವ ಉಗ್ರಪ್ಪ ನಾಯಕ ಸಮುದಾಯದ ಪ್ರಭಾವಶಾಲಿ ಮುಖಂಡ, ಹೀಗಾಗಿ ಶ್ರೀರಾಮುಲು ಸಹೋದರಿ ಶಾಂತ ವಿರುದ್ಧ ಉಗ್ರಪ್ಪ ಪರ್ಫೆಕ್ಟ್ ಅಭ್ಯರ್ಥಿ ಎಂದು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ಬಳ್ಳಾರಿಯ ಆರು ಶಾಸಕರು ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಒಮ್ಮತ ತೋರುತ್ತಿಲ್ಲ, ಹೀಗಾಗಿ ಪಾವಗಡ ಎಸ್ ಟಿ ನಾಯಕ ಉಗ್ರಪ್ಪ ಅವರೇ ಸಮರ್ಥರು ಎಂದು ಕಾಂಗ್ರೆಸ್ ನಂಬಿದೆ.
ಉಗ್ರಪ್ಪ ಪಕ್ಷದ ನಿಷ್ಠಾವಂತ ಕಾರ್ಯಕರ್ತ,, ಉಗ್ರಪ್ಪ ಅವರನ್ನು ಬಳ್ಳಾರಿಯಿಂದ ಕಣಕ್ಕಿಳಿಸುವ ಮೂಲಕ ಸ್ಥಳೀಯ ಶಾಸಕರ ಎಲ್ಲಾ ರೀತಿಯ ಭಿನ್ನಮತ ಹತ್ತಿಕ್ಕಬಹುದು ಹಾಗೂ ಉಗ್ರಪ್ಪ ಹಣಕಾಸಿನಲ್ಲಿ ಅಷ್ಟೊಂದು ಸಮರ್ಥರಾಗಿರದ ಕಾರಣ ಸ್ಥಳೀಯ ಶಾಸಕರು ಅವರಿಗೆ ಸಂಪನ್ಮೂಲ ಸಂಗ್ರಹಿಸಿ ನೀಡಬೇಕೆಂದು ನಿರ್ಧರಿಸಲಾಗಿದೆ ಎಂದು ಹೆಸರು ಹೇಳಲು ಬಯಸದ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ಬಳ್ಳಾರಿ ರೆಡ್ಡಿ ಸಹೋದರರ ವಿರುದ್ಧ ಅಕ್ರಮ ಗಣಿಗಾರಿಕೆ ಹಗರಣ ಬಯಲಿಗೆಳೆದದ್ದು, ಉಗ್ರಪ್ಪ ಅವರಿಗೆ ಸಹಾಯವಾಗಲಿದೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics