ಕಲಬುರಗಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯೇ ನಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಪಿ ಚಿದಂಬರಂ ಅವರ ಹೇಳಿಕೆ ವೈಯಕ್ತಿಕ ಹೊರತು ಪಕ್ಷದ್ದಲ್ಲ. ಯಾವ ಸಂದರ್ಭದಲ್ಲಿ ಮತ್ತು ಯಾವ ಅರ್ಥದಲ್ಲಿ ಚಿದಂಬರಂ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ನಾನು ರಾಹುಲ್ ಗಾಂಧಿಯೇ ಪ್ರಧಾನಿ ಅಭ್ಯರ್ಥಿಯಾಗಬೇಕು ಎಂದು ಬಯಸುತ್ತೇನೆ ಎಂದಿದ್ದಾರೆ.
ಲೋಕಸಭೆ ಚುನಾವಣೆಗೆ ಇನ್ನೂ ಸಾಕಷ್ಟು ಸಮಯ ಇದೆ. ಮಹಾಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರಾಗುತ್ತಾರೆ ಎಂಬುದು ಚುನಾವಣೆ ವೇಳೆ ನಿರ್ಧಾರವಾಗುತ್ತೆ. ಆದರೆ ಪ್ರಸ್ತುತ ರಾಹುಲ್ ಗಾಂಧಿಯೇ ನಮ್ಮ ಪಕ್ಷದ ಪ್ರಧಾನಿ ಅಭ್ಯುರ್ಥಿ ಎಂಬುದು ನಿಸ್ಸಂಶಯ ಎಂದು ಖರ್ಗೆ ಹೇಳಿದ್ದಾರೆ.
ಇದೇ ವೇಳೆ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನಾ ಅವರನ್ನು ನೇರವಾಗಿ ನೇಮಿಸಲು ಕಾರಣವೇನು ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದ ಖರ್ಗೆ, ರಾಕೇಶ್ ಆಸ್ಥಾನಾ ಅವರು ಪ್ರಧಾನಿ ನರೇಂದ್ರ ಮೋದಿಗೆ ಪರಿಚಯದ ವ್ಯಕ್ತಿ. ಪ್ರಧಾನಿ ಕಚೇರಿಯವರೇ ಅವರನ್ನು ನೇರವಾಗಿ ನೇಮಿಸಿದ್ದಾರೆ ಎಂದು ಆರೋಪಿಸಿದ್ದಾರೆ.