ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ದೇಶದ ಗಮನ ಸೆಳೆದಿದ್ದು, ಮುಂದಿನ ಲೋಕಸಭೆ ಚುನಾವಣೆಗೆ ಸೆಮಿ ಫೈನಲ್ ಎಂದೇ ಬಿಂಬಿಸಲಾಗುತ್ತಿದೆ.
ಇನ್ನು ರೇಷ್ಮೆ ನಗರಿ ರಾಮನಗರದಲ್ಲೂ ನಿಧಾನಕ್ಕೆ ಉಪ ಚುನಾವಣೆ ರಂಗೇರುತ್ತಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು, ತಾವು ರಾಮನಗರ ಜನತೆಯ ಅಕ್ಕರೆಯ ಅಕ್ಕನಾಗುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಎಚ್ ಡಿ ಕುಮಾರಸ್ವಾಮಿ ಅವರ ಪತ್ನಿ ಎಂಬ ಒಂದೇ ಕಾರಣಕ್ಕೆ ನಿಮ್ಮನ್ನು ಕಣಕ್ಕಿಳಿಸಲಾಗಿದೆಯೇ?
ಇದು ಸತ್ಯಕ್ಕೆ ದೂರವಾದ ಮಾತು. 1990ರಿಂದ ಸಾರ್ವಜನಿಕ ಜೀವನದಲ್ಲಿ ನನ್ನದೆಯಾದ ಕೆಲಸಗಳಿಂದ ನಾನು ಗುರುತಿಸಿಕೊಂಡಿದ್ದೇನೆ. ನಾನು ರಾಜಕೀಯ ಅನನುಭವಿ ಅಲ್ಲ. ಸಾರ್ವಜನಿಕ ಜೀವನದಲ್ಲಿ ನನ್ನ ಪತಿ ಕುಮಾರಸ್ವಾಮಿಗೆ ಬೆಂಬಲವಾಗಿ ನಿಂತುಕೊಂಡಿದ್ದೇನೆ. ರಾಮನಗರದ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ನಾನು ಭಾಗಿಯಾಗಿದ್ದೇನೆ. ಹೀಗಾಗಿ ಜನ ನನ್ನನ್ನು ಹಿರಿಯ ಅಕ್ಕ ಎನ್ನುತ್ತಾರೆ ಎಂದರು.
ಆದರೆ ರಾಮನಗರದಲ್ಲಿ ಹಲವರು ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು.....
ಇಲ್ಲ. ಇದು ಎಚ್ ಡಿ ಕುಮಾರಸ್ವಾಮಿ ಅವರ ಆಯ್ಕೆ. ಅವರು ರಾಮನಗರಕ್ಕೆ ರಾಜಿನಾಮೆ ನೀಡಿದ ನಂತರ ಉಪ ಚುನಾವಣೆಯಲ್ಲಿ ನನ್ನನ್ನೇ ಅಭ್ಯರ್ಥಿ ಮಾಡಬೇಕು ಎಂದು ರಾಮನಗರ ಜನತೆ ಕುಮಾರಸ್ವಾಮಿಯನ್ನು ಒತ್ತಾಯಿಸಿದ್ದರು. ಅವರ ಒತ್ತಾಯದ ಮೇರೆಗೆ ಕುಮಾರಸ್ವಾಮಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.
ಬೆಂಗಳೂರಿನಲ್ಲಿರುವ ನಿಮ್ಮನ್ನು ಗೆಲ್ಲಿಸಿದರೆ ನೀವು ಮತದಾರರ ಕೈಗೆ ಸಿಗುವುದಿಲ್ಲ ಎಂದು ಪ್ರತಿಸ್ಪರ್ಧಿಗಳು ಹೇಳುತ್ತಿದ್ದಾರೆ?
ಅದೊಂದು ಆಧಾರ ರಹಿತಿ ಆರೋಪ. ವಾರದಲ್ಲಿ ಕನಿಷ್ಠ ಎರಡು ಬಾರಿ ನಾನು ನನ್ನ ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ ಮತ್ತು ಬೆಂಗಳೂರು ರಾಮನಗರಕ್ಕೆ ತುಂಬಾ ಹತ್ತಿರದಲ್ಲಿರುವುದರಿಂದ ಕ್ಷೇತ್ರದ ಜನತೆಗೆ ನನ್ನ ಮನೆ ಬಾಗಿಲು 24 ಗಂಟೆ ತೆರೆದಿರುತ್ತದೆ ಎಂದರು.
ನೀವು ಗೆದ್ದರೆ ನಿಮ್ಮ ಮೊದಲ ಆದ್ಯತೆ ಯಾವುದಕ್ಕೆ?
ರಾಜೀವ್ ಗಾಂಧಿ ಆರೋಗ್ಯ ವಿವಿಯನ್ನು ಬೆಂಗಳೂರಿನಿಂದ ರಾಮನಗರಕ್ಕೆ ಸ್ಥಳಾಂತರ ಮಾಡುವುದು. ಬಡವರಿಗೆ ಮನೆ ನೀಡುವುದು. ಯಾವುದೇ ವಿಳಂಬವಿಲ್ಲದೆ ಕನಿಷ್ಠ 5 ಸಾವಿರ ಮಂದಿಗೆ ಮನೆ ನಿರ್ಮಿಸಿಕೊಡುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದರು.
ನಿಮ್ಮ ಪರವಾಗಿ, ನಿಮ್ಮ ಪುತ್ರ, ನಟ ನಿಖಿಲ್ ಪ್ರಚಾರ ಮಾಡುತ್ತಾರೆಯೆ?
ಹೌದು. ನಿಖಿಲ್ ರಾಮನಗರದಲ್ಲಿ ಮೂರು ದಿನ ಪ್ರಚಾರ ಮಾಡುತ್ತಾರೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಮತ್ತು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸಹ ಒಂದು ದಿನ ನನ್ನ ಪರವಾಗಿ ಪ್ರಚಾರ ಮಾಡುತ್ತಾರೆ. ಕಾಂಗ್ರೆಸ್ ನಾಯಕರಾದ ಡಿ ಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಅವರು ಸಹ ಜೆಡಿಎಸ್ ಮುಖಂಡರೊಂದಿಗೆ ಜಂಟಿ ಪ್ರಚಾರ ಮಾಡಲಿದ್ದಾರೆ ಎಂದು ಅನಿತಾ ಕುಮಾರಸ್ವಾಮಿ ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos