ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ
ಹುಬ್ಬಳ್ಳಿ: ವಾಲ್ಮೀಕಿ ಜಯಂತಿ ಆಚರಣೆ ವಿಚಾರವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮೈತ್ರಿ ಸರ್ಕಾರದಿಂದ ವಾಲ್ಮೀಕಿ ಸಮಾಜಕ್ಕೆ ಅವಮಾನವಾಗಿದೆ ಎಂದು ಬುಧವಾರ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿ ಹಾಗೂ ಬಾಗಕೋಟೆ ಜಮಖಂಡಿಯ ಆನಗೂರಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು ಮೈತ್ರಿ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದರು.
ವಾಲ್ಮೀಕಿ ಪ್ರಶಸ್ತಿ ಸ್ವೀಕರಿಸದ ದೇವೇಗೌಡ, ಕಾರ್ಯಕ್ರಮಕ್ಕೆ ಗೈರಾದ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಶ್ರೀರಾಮುಲು ಅವರನ್ನು 420 ಎಂದು ಕರೆದ ಮಾಜಿ ಮುಖ್ಯಮಂತ್ರಿ ಸಿದ್ದರಾಯ್ಯ ಇವರೆಲ್ಲರೂ ವಾಲ್ಮೀಕಿ ಸಮಾಜಕ್ಕೆ ಅವಮಾನ ಮಾಡಿದ್ದು, ಕೂಡಲೇ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.
ಬೆಂಗಳೂರು ವಿಧಾನಸೌಧದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ, ಪರಮೇಶ್ವರ್ ಇಬ್ಬರೂ ಸಮಾರಂಭಕ್ಕೆ ಹಾಜರಾಗದೇ ವಾಲ್ಮೀಕಿ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಹೀಗಾಗಿ ಮೈತ್ರಿ ಸರ್ಕಾರ ಕ್ಷಮೆ ಕೇಳಬೇಕು. ಒಂದು ವೇಳೆ ಕ್ಷಮೆ ಕೇಳದೇ ಹೌದರೆ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.